ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಜೂನ್ 7ರಿಂದ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ

ಅಧಿಕ ಮಾಸದ ಅಂಗವಾಗಿ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಜೂನ್ 7ರಿಂದ 13ರವರೆಗೆ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ್ ಮಹಾರಾಜ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಪ್ರಸಿದ್ಧ ಪುಣ್ಯಕ್ಷೇತ್ರ ಪಂಢರಪುರ, ಶ್ರೀ ಚೈತನ್ಯ ಸದ್ಗುರು ಹರದಾಸ್ವಾಮಿ ಹ. ಹಿರೇಹರಕರ ಬಹುಉದ್ದೇಶೀಯ ಸಂಸ್ಥೆ ಹಾಗೂ ಪಂಢರಪುರದ ಸಹಯೋಗದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಧಿಕ ಜೇಷ್ಠ ಬಹುಳ ಸಪ್ತಮಿಯಾದ ಜೂನ್ 7ರಂದು ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮೂಹಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹಕ್ಕೆ ಚಾಲನೆ ದೊರೆಯಲಿದ್ದು, ಜೂನ್ 13ರಂದು ಅಧಿಕ ಜೇಷ್ಠ ಬಹುಳ ತ್ರಯೋದಶಿಯಂದು ಮಹಾಮಂಗಳದೊಂದಿಗೆ ಕಾರ್ಯಕ್ರಮಗಳು ಸಮಾಪ್ತಿಗೊಳ್ಳಲಿವೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಜೂನ್ 7ರಂದು ಬೆಳಗ್ಗೆ 7 ಗಂಟೆಗೆ ಸಂಸ್ಥೆಯ ವತಿಯಿಂದ ಮೊದಲ ಬಾರಿಗೆ ಶ್ರೀ ಗ್ರಂಥರಾಜ ‘ಜ್ಞಾನೇಶ್ವರಿ’ ಗ್ರಂಥದ ಬಿಡುಗಡೆ ಸಮಾರಂಭವೂ ನಡೆಯಲಿದೆ ಎಂದು ತಿಳಿಸಿದರು.

ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮಹಾಮಂಡಲೇಶ್ವರ 1008 ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾರಾಜರು (ಶ್ರೀ ಪಂಢರಿನಾಥ ಮಹಾರಾಜರು, ಜೂನಾ ಅಖಾಡಾ) ಅವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ್ ಶರದಾಸ್ವಾಮಿ ಹಿರೇಹರಕರ ಅವರ ನೇತೃತ್ವದಲ್ಲಿ ಜರುಗಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಟಿ. ಪಾಟೀಲ್, ರಮೇಶ್ ಅರಕೇರಿ, ಪಾಪು ಸಿಂಗ್ ರಜಪೂತ್, ಗೋಪಾಲ್, ತೇಜಪ್ಪ ಮಹಾರಾಜ್, ವಿನೋದ್ ಕುಮಾರ್ ಕಾಸರಗೋಡು ಸೇರಿದಂತೆ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!