ಮಂಜೇಶ್ವರ / ಕಾಸರಗೋಡು : ಜಿಲ್ಲೆಯಲ್ಲಿ ಮಳೆಯ ತೀವ್ರತೆ ತುಸು ತಗ್ಗಿದೆಯಾದರೂ, ಕಡಲ ಅಲೆಗಳ ತೀವ್ರ ಆರ್ಭಟ ಮುಂದುವರಿದಿದ್ದು, ಮಂಜೇಶ್ವರ ಹಾಗೂ ಉಪ್ಪಳ ಭಾಗದ ಕರಾವಳಿ ತೀರದ ಜನತೆಯನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಸಮುದ್ರದ ಅಬ್ಬರಕ್ಕೆ ತೀರಪ್ರದೇಶವು ಕೊರೆದುಹೋಗುತ್ತಿದ್ದು, ಹತ್ತಕ್ಕೂ ಹೆಚ್ಚು ವಸತಿಗಳು ಅಪಾಯದ ಅಂಚಿನಲ್ಲಿವೆ.

ಉಪ್ಪಳದ ಶಾರದಾ ನಗರ ಪ್ರದೇಶದಲ್ಲಿ ಈಗಾಗಲೇ ಒಂದು ಮನೆ ಸಂಪೂರ್ಣ ಕುಸಿದುಬಿದ್ದಿದ್ದು, ಸಮೀಪದ ಮೂರು ಪ್ರಮುಖ ಮನೆಗಳು ಯಾವಾಗ ಬೇಕಾದರೂ ಸಮುದ್ರ ಪಾಲಾಗುವ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಡಲು ದಿನದಿಂದ ದಿನಕ್ಕೆ ಮುಂದೆ ನುಗ್ಗುತ್ತಿರುವುದರಿಂದ ಹಲವಾರು ತೆಂಗಿನ ಮರಗಳು ಮತ್ತು ಮೀಟರ್‌ಗಟ್ಟಲೆ ಕರಾವಳಿ ಜಮೀನು ಕಡಲೊಡಲಿಗೆ ಸೇರಿವೆ.
ಮಧುವಾಹಿನಿ, ಕಾರ್ಯಂಗೋಡು ಮತ್ತು ತೇಜಸ್ವಿನಿ ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ
ಕಡಲಕೊರೆತ ಮತ್ತು ಪ್ರವಾಹದ ಭೀತಿಯಿಂದ ತತ್ತರಿಸಿರುವ 88 ಕುಟುಂಬಗಳ 325ಕ್ಕೂ ಅಧಿಕ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಇದರಲ್ಲಿ 132 ಪುರುಷರು, 143 ಮಹಿಳೆಯರು ಹಾಗೂ 50 ಮಕ್ಕಳು ಸೇರಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಒಟ್ಟು 67 ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದರೆ, ಉಳಿದ ಸಂತ್ರಸ್ತರಿಗಾಗಿ ಜಿಲ್ಲಾಡಳಿತವು ವೆಳ್ಳರಿಕುಂಡು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಒಟ್ಟು 6 ಪುನರ್ವಸತಿ ಕೇಂದ್ರಗಳನ್ನು ತೆರೆದಿದೆ.
ಭಾರೀ ಮಳೆ ಮತ್ತು ಕಡಲಿನ ಅಬ್ಬರದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ, ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲೆಗಳು, ಕಾಲೇಜುಗಳು, ವೃತ್ತಿಪರ ಶಿಕ್ಷಣ ಸಂಸ್ಥೆಗಳು, ಅಂಗನವಾಡಿಗಳು, ಟ್ಯೂಷನ್ ಸೆಂಟರ್‌ಗಳು, ಸಿಬಿಎಸ್‌ಇ/ಐಸಿಎಸ್‌ಇ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಹಾಗೂ ಮದ್ರಸಗಳಿಗೆ ಆಗಸ್ಟ್ 3ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಆದೇಶ ಹೊರಡಿಸಿದ್ದಾರೆ.

ಪರಿಸ್ಥಿತಿಯನ್ನು ಅವಲೋಕಿಸಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ಜರುಗಿದೆ. ಯಾವುದೇ ರೀತಿಯ ಪ್ರಕೃತಿ ವಿಕೋಪದ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಗ್ಗು ಪ್ರದೇಶ ಹಾಗೂ ಕಡಲ ತೀರದ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

