ಕಾಸರಗೋಡು : ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಆಂಬುಲನ್ಸ್‌ನಲ್ಲಿಯೇ ಯುವತಿಯೊಬ್ಬಳಿಗೆ ಸುಖಪ್ರಸವವಾಗಿರುವ ಘಟನೆ ಇಂದು (ಸೋಮವಾರ) ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ.ಇರಿಕ್ಕೂರು ಹಾಗೂ ಪೆರುವಳತ್ತುಪರಂಬು ನಿವಾಸಿ ಯುವತಿ ಮಗುವಿಗೆ ಜನ್ಮ ನೀಡಿದ್ದಾರೆ.

ಬೆಳಗ್ಗೆ ಮನೆಯಲ್ಲಿ ಇದ್ದಾಗ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಟೋ-ಟ್ಯಾಕ್ಸಿ ಮೂಲಕ ಆಸ್ಪತ್ರೆಗೆ ಹೊರಟಿದ್ದರು. ಮಾರ್ಗಮಧ್ಯೆ ಇರಿಕ್ಕೂರು ಪೆಟ್ರೋಲ್ ಪಂಪ್ ಬಳಿಗೆ ತಲುಪಿದಾಗ ಆಂಬುಲನ್ಸ್ ವ್ಯವಸ್ಥೆ ಮಾಡಲಾಯಿತು.

ಆಂಬುಲನ್ಸ್‌ನಲ್ಲಿಯೇ ಪ್ರಸವವಾದ ಹಿನ್ನೆಲೆಯಲ್ಲಿ, ಮೊದಲು ಯುವತಿಯನ್ನು ಇರಿಕ್ಕೂರ್‌ನ ಖಾಸಗಿ ಆಸ್ಪತ್ರೆಗೆ ಹಾಗೂ ನಂತರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.ಈ ಮೊದಲು ಯುವತಿಯು ತಲಶ್ಶೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕಾರಣ, ನಂತರ ಆಕೆಯನ್ನು ತಾಲೂಕು ಆಸ್ಪತ್ರೆಯಿಂದ ಮತ್ತೆ ತಲಶ್ಶೇರಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.


