ಬಂಟ್ವಾಳ: ಮಳೆಗಾಲದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ತಲುಪಿದಾಗ ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಪದೇ ಪದೇ ಮನವಿ ಮಾಡುತ್ತಿದ್ದರೂ, ಕೆಲವರು ಜೀವದ ಹಂಗು ತೊರೆದು ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿರುವ ದೃಶ್ಯಗಳು ಮತ್ತೆ ಬೆಳಕಿಗೆ ಬಂದಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ಪಾಣೆಮಂಗಳೂರು ಹಳೆಯ ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಯುವಕರು ಹಾಗೂ ಬಾಲಕರು ಜಿಗಿಯುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕೆಲವು ದೃಶ್ಯಗಳಲ್ಲಿ ಅಪ್ರಾಪ್ತ ಬಾಲಕರು ಕೂಡ ಈ ಅಪಾಯಕಾರಿ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದರ ಜೊತೆಗೆ, ನಂದಾವರ ಸಮೀಪದ ಶಾರದ ಶಾಲೆ ಬಳಿಯೂ ಬಾಲಕರು ನದಿಗೆ ಹಾರುತ್ತಿರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೆ, ನೆರೆ ನೀರಿನಿಂದ ತುಂಬಿ ಹರಿಯುತ್ತಿರುವ ಕೆಸರು ನೀರಿನಲ್ಲೇ ಬಾಲಕರು ಈಜುತ್ತಿರುವ ದೃಶ್ಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ನೆರೆ ಸಂದರ್ಭ ನದಿಯಲ್ಲಿ ನೀರು ತೀವ್ರ ವೇಗದಲ್ಲಿ ಹರಿಯುತ್ತಿದ್ದು, ಮೇಲ್ಭಾಗದಿಂದ ಕೊಚ್ಚಿಕೊಂಡು ಬರುವ ಮರದ ದಿಮ್ಮಿಗಳು, ಕೊಂಬೆಗಳು ಹಾಗೂ ಇತರೆ ವಸ್ತುಗಳು ನೀರಿನೊಳಗೆ ಕಾಣಿಸದೇ ಹರಿಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಎತ್ತರದಿಂದ ನದಿಗೆ ಜಿಗಿಯುವುದು ಅಥವಾ ಈಜಲು ಇಳಿಯುವುದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಹಾಗೂ ಅಧಿಕಾರಿಗಳು ಪದೇ ಪದೇ ಎಚ್ಚರಿಸುತ್ತಿದ್ದಾರೆ.
ಒಂದು ಕ್ಷಣದ ನಿರ್ಲಕ್ಷ್ಯ ಜೀವಪರ್ಯಂತದ ದುರಂತಕ್ಕೆ ಕಾರಣವಾಗಬಹುದು. ಅಪಘಾತ ಸಂಭವಿಸಿದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸುವುದು ಕೂಡ ಬಹಳ ಸವಾಲಿನ ಸಂಗತಿಯಾಗಿದೆ. ಆದ್ದರಿಂದ ಇಂತಹ ಅಪಾಯಕಾರಿ ಸಾಹಸಗಳನ್ನು ಪ್ರೋತ್ಸಾಹಿಸುವುದು ಅಥವಾ ಅವುಗಳ ವಿಡಿಯೊಗಳನ್ನು ಮನರಂಜನೆಯಂತೆ ಹಂಚಿಕೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ತಾಲೂಕು ಆಡಳಿತವು ನದಿ ತೀರಗಳಿಗೆ ಅನಗತ್ಯವಾಗಿ ತೆರಳದಂತೆ ನಿರಂತರ ಎಚ್ಚರಿಕೆ ನೀಡುತ್ತಿದ್ದರೂ, ಕೆಲವರು ಅದನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಅಗತ್ಯವಿದ್ದಲ್ಲಿ ಇಂತಹ ಅಪಾಯಕಾರಿ ಕೃತ್ಯಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
ಅಧಿಕಾರಿಗಳು ಪೋಷಕರಿಗೂ ವಿಶೇಷ ಮನವಿ ಮಾಡಿದ್ದು, ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ, ನೆರೆ ನೀರಿನ ಬಳಿ ಹೋಗದಂತೆ ತಿಳಿವಳಿಕೆ ನೀಡುವಂತೆ ಕೋರಿದ್ದಾರೆ. ಮಳೆಗಾಲದ ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆ ಜೀವ ಉಳಿಸಬಹುದು ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕಿದೆ.


