ಗೋಲ್ಡನ್ ಮೂವೀಸ್‌ನ ‘ಪಿಕ್ಚರ್’ ಆಗಸ್ಟ್ 7ಕ್ಕೆ ಬಿಡುಗಡೆ.ತುಳು-ಕನ್ನಡ ದ್ವಿಭಾಷಾ ಚಿತ್ರದ ಮೇಲೆ ಭಾರೀ ನಿರೀಕ್ಷೆ

ಮಂಗಳೂರು:ಸಂದೀಪ್ ಬೆದ್ರ ನಿರ್ದೇಶನದಲ್ಲಿ ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ತುಳು-ಕನ್ನಡ ದ್ವಿಭಾಷಾ ಚಿತ್ರ ‘ಪಿಕ್ಚರ್’ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕಿ ಶಿಲ್ಪಾ ಗಣೇಶ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಸಣ್ಣ ಮಟ್ಟದ ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರದ ಚಿತ್ರವಾಗಿ ಯೋಜನೆ ರೂಪಿಸಲಾಗಿದ್ದರೂ, ಚಿತ್ರ ನಿರ್ಮಾಣದ ಹಂತದಲ್ಲಿ ತಂಡದ ಶ್ರಮ ಮತ್ತು ಕಲಾವಿದರ ಸಹಕಾರದಿಂದ ಅದನ್ನು ದೊಡ್ಡ ಮಟ್ಟದಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.

ಪುತ್ತೂರು ಹಾಗೂ ಉಡುಪಿಯಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಗಳಿಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದಲ್ಲಿನ ಹಾಸ್ಯ, ಕುಟುಂಬ ಮೌಲ್ಯಗಳು ಹಾಗೂ ಮನರಂಜನಾ ಅಂಶಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಅವರು ತಿಳಿಸಿದರು.

ಚಿತ್ರದ ನಿರ್ಮಾಣದಿಂದ ಹಿಡಿದು ಪ್ರಚಾರದವರೆಗೆ ಕಲಾವಿದರು, ತಾಂತ್ರಿಕ ತಂಡ ಹಾಗೂ ತುಳು ಚಿತ್ರರಂಗದ ಹಿರಿಯರ ಬೆಂಬಲ ಅಪಾರವಾಗಿತ್ತು. ವಿಶೇಷವಾಗಿ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಪುಷ್ಪರಾಜ್ ಬೊಳ್ಳಾರ್, ಅರ್ಜುನ್ ಕಾಪಿಕಾಡ್ ಸೇರಿದಂತೆ ಹಲವರು ಚಿತ್ರದ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಶಿಲ್ಪಾ ಗಣೇಶ್ ಹೇಳಿದರು.

ಚಿತ್ರದ ಹಾಡುಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಜನಪ್ರಿಯವಾಗಿವೆ. ಕನ್ನಡದ ಖ್ಯಾತ ನಿರ್ದೇಶಕರಾದ ಸಿಂಪಲ್ ಸುನಿ, ಅನೂಪ್ ಭಂಡಾರಿ ಹಾಗೂ ಚೇತನ್ ರೇಂಜರ್ ಸಾಹಿತ್ಯ ರಚಿಸಿದ್ದು, ಜಸ್ಸಿ ಗಿಫ್ಟ್, ಹರಿಕೃಷ್ಣ ಸೇರಿದಂತೆ ಹಲವು ಗಾಯಕರು ಧ್ವನಿಯಾಗಿದ್ದಾರೆ ಎಂದರು.

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ , ತುಳು ಚಿತ್ರರಂಗದ ಕಲಾವಿದರ ಸೇವೆ ಅನನ್ಯವಾಗಿದ್ದು, ‘ಪಿಕ್ಚರ್’ ಚಿತ್ರದ ಮೂಲಕ ತುಳು ಭಾಷೆಗೆ ತಮ್ಮಿಂದಲೂ ಒಂದು ಸಣ್ಣ ಕೊಡುಗೆ ನೀಡಿರುವ ಸಂತಸವಿದೆ ಎಂದು ಹೇಳಿದರು.

ಈ ಚಿತ್ರವನ್ನು ಲಾಭದ ಉದ್ದೇಶಕ್ಕಿಂತ ಹೆಚ್ಚಾಗಿ ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿಯಿಂದ ನಿರ್ಮಿಸಲಾಗಿದೆ. ಚಿತ್ರಕ್ಕೆ ಪ್ರೇಕ್ಷಕರ ಆಶೀರ್ವಾದ ದೊರೆತರೆ ಅದುವೇ ತಂಡಕ್ಕೆ ದೊಡ್ಡ ಗೆಲುವಾಗಲಿದೆ. . ತುಳು ನಟರು ನಮ್ಮ ಪ್ರೊಡಕ್ಷನ್ ನ ಸಿನಿಮಾದಲ್ಲಿ ನಟಿಸಿರುವುದು ನಮಗೆ ಹೆಮ್ಮೆ ಆಗ್ತಿದೆ. ಹೊಸ ನಟನನ್ನು ಪರಿಚಯಿಸುವ ಮೂಲಕ ತುಳು ರಂಗಭೂಮಿಯ ಅನೇಕ ನಟರು ನಮ್ಮ ಹೊಸ ಸಿನಿಮಾದಲ್ಲಿ ನಟಿಸಿರುವುದು ಖುಷಿ ಎನಿಸಿದೆ ಅಂದರು

ಹಿರಿಯ ನಟ ದೇವದಾಸ್ ಕಾಪಿಕಾಡ್ ಮಾತನಾಡಿ, ತುಳು ಚಿತ್ರರಂಗ ಈಗ ಸುವರ್ಣಯುಗದತ್ತ ಸಾಗುತ್ತಿದ್ದು, ‘ಪಿಕ್ಚರ್’ ಚಿತ್ರ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದರು. ಹೊಸ ಪ್ರತಿಭೆ ನಿತ್ಯಪ್ರಕಾಶ್ ಬಂಟ್ವಾಳ್ ಉತ್ತಮ ಅಭಿನಯ ನೀಡಿದ್ದು, ತುಳು ಚಿತ್ರರಂಗಕ್ಕೆ ಮತ್ತೊಬ್ಬ ನಾಯಕ ನಟನ ಸೇರ್ಪಡೆಯಾಗಿದೆ ಎಂದು ಪ್ರಶಂಸಿಸಿದರು.

ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ನಾಯಕನಾಗಿ ಹಾಗೂ ಅಮೃತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪುಷ್ಪರಾಜ್ ಬೊಳ್ಳಾರ್, ಅರ್ಜುನ್ ಕಾಪಿಕಾಡ್ ಸೇರಿದಂತೆ ಹಲವಾರು ಖ್ಯಾತ ತುಳು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಸಂತೋಷ್ ರೈ ಮತ್ತು ಚಂದ್ರಶೇಖರ್ ಕೆ.ಎಸ್. ಛಾಯಾಗ್ರಹಣ ನೀಡಿದ್ದು, ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಾಯಕ ನಿತ್ಯಪ್ರಕಾಶ್ ಬಂಟ್ವಾಳ್, ನಾಯಕಿ ಅಮೃತಾ, ಸಿನೆಮಾ ರಂಗದ ಪ್ರಮುಖರಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರ್ಜುನ್ ಕಾಪಿಕಾಡ್, ಸ್ಯಾಮ್ಯುಯೆಲ್ ಅಬಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!