ಮಂಗಳೂರು: ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೃಷಿಕರಿಗೆ ಅಗತ್ಯವಾದ ಸಲಕರಣೆಗಳು, ಆಧುನಿಕ ತಂತ್ರಜ್ಞಾನ ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ಸುರತ್ಕಲ್ನಲ್ಲಿ ಪ್ರಥಮ ಬಾರಿಗೆ ಕೃಷಿ ಹಾಗೂ ಆಹಾರ ಮೇಳ ಆಯೋಜಿಸಲಾಗಿದೆ ಎಂದು ರೈತಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಸುರತ್ಕಲ್ ಹಾಗೂ ಬಂಟರ ಸಂಘ ಸುರತ್ಕಲ್ ಸಹಯೋಗದಲ್ಲಿ ಸೆ.25, 26 ಮತ್ತು 27ರಂದು ಸುರತ್ಕಲ್ನ ಬಂಟರ ಭವನದಲ್ಲಿ ಮೇಳ ನಡೆಯಲಿದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ಮೇಳ ವೀಕ್ಷಿಸಲು ಅವಕಾಶವಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ನವೀನ ಉಪಕರಣಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ಯವನ್ನು ಸುಲಭಗೊಳಿಸುವ ವಿವಿಧ ಸಲಕರಣೆಗಳ ಪರಿಚಯ, ಬಳಕೆ ಹಾಗೂ ಲಭ್ಯತೆ ಕುರಿತು ಕೃಷಿಕರಿಗೆ ಮಾಹಿತಿ ನೀಡುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಕೃಷಿ ಸಲಕರಣೆಗಳ ಪ್ರದರ್ಶನದೊಂದಿಗೆ ಮಾಹಿತಿ ಮತ್ತು ಮಾರಾಟ ಮಳಿಗೆಗಳೂ ಇರಲಿದ್ದು, ಕೃಷಿಕರು ತಮ್ಮ ಅಗತ್ಯಕ್ಕೆ ತಕ್ಕ ಉಪಕರಣಗಳನ್ನು ನೇರವಾಗಿ ವೀಕ್ಷಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಮನೆ ತೋಟ, ಕೈತೋಟ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೂ ಮೇಳ ಪ್ರಯೋಜನಕಾರಿಯಾಗಲಿದೆ. ವಿವಿಧ ಬಗೆಯ ಸಸಿಗಳು, ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಮಗ್ರಿಗಳ ಪರಿಚಯ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬಂಟರ ಸಂಘ ಸುರತ್ಕಲ್ನ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಮಾತನಾಡಿ, ಮೇಳವನ್ನು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಲಿದ್ದು, ಬಂಟರ ಸಂಘ ಸುರತ್ಕಲ್ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೃಷಿ ಕ್ಷೇತ್ರದ ಸಾಧನೆಗಾಗಿ ಬಂಟರ ಸಂಘದ ಕೃಷಿ ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ ಖಂಡಿಗೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.

ಕೃಷಿ ಮೇಳದ ಜತೆಗೆ ಆಹಾರ ಮೇಳವೂ ನಡೆಯಲಿದ್ದು, ವಿವಿಧ ಆಹಾರ ಉತ್ಪನ್ನಗಳ ಪರಿಚಯ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಉತ್ಪನ್ನಗಳು ಹಾಗೂ ಆಹಾರ ಸಂಸ್ಕೃತಿಯ ನಡುವಿನ ಸಂಬಂಧವನ್ನು ಪರಿಚಯಿಸುವ ನಿಟ್ಟಿನಲ್ಲಿ ಆಹಾರ ಮೇಳವೂ ಪ್ರಮುಖ ಆಕರ್ಷಣೆಯಾಗಲಿದೆ. ಕೃಷಿಕರು, ತೋಟಗಾರಿಕೆ ಆಸಕ್ತರು, ಮಹಿಳೆಯರು, ಯುವಜನರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘ ಸುರತ್ಕಲ್ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ರೈತಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ಮಳಲಿ ಉಪಸ್ಥಿತರಿದ್ದರು.

