ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ : ಶಾಸಕ ಡಾ. ವೈ. ಭರತ್ ಶೆಟ್ಟಿ

ಮಂಗಳೂರು:ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಹಾಗೂ ಪರೀಕ್ಷಾ ಪ್ರಕ್ರಿಯೆಗಳ ವಿರುದ್ಧ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರು ಎಂಬ ಗೊಂದಲದಲ್ಲೇ ಮೂರು ವರ್ಷಗಳ ಬಳಿಕ ಮುಗಿದಿದ್ದರೂ, ಕಳೆದ ಮೂರು ತಿಂಗಳಿಂದ ಮಂತ್ರಿಗಳು ಹಾಗೂ ಇಲಾಖೆಗಳ ಬಗ್ಗೆ ಗೊಂದಲ ಮುಂದುವರಿದಿದೆ ಎಂದು ಟೀಕಿಸಿದರು .

ರಾಜ್ಯದಲ್ಲಿ ನಡೆಯುತ್ತಿರುವ ಕೆಇಎ, ಕೆಪಿಎಸ್ಸಿ, ಎಸ್‌ಎಸ್‌ಎಲ್‌ಸಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲೂ ಅಕ್ರಮ ಹಾಗೂ ಗೊಂದಲಗಳು ನಡೆಯುತ್ತಿವೆ ಎಂದು ದೂರಿದ ಅವರು, ಯುವಜನರ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಕೇಂದ್ರದ ನೀಟ್ ಪರೀಕ್ಷೆಯ ವಿಚಾರದಲ್ಲಿ ಪ್ರಧಾನಮಂತ್ರಿಗಳ ಹೊಣೆಗಾರಿಕೆ ಕೇಳುವ ಕಾಂಗ್ರೆಸ್ ನಾಯಕರು, ರಾಜ್ಯದ ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಅಧಿಕಾರಿಗಳ ಮೇಲೆ ಮಾತ್ರ ಹೊಣೆ ಹಾಕುತ್ತಿದ್ದಾರೆ. ಇದು ದ್ವಂದ್ವ ನೀತಿಯಾಗಿದೆ ಎಂದು ಕಿಡಿಕಾರಿದರು .

ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲೇ ಭ್ರಷ್ಟಾಚಾರ ಹಾಗೂ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಹೆಚ್ಚಾಗಿವೆ ಎಂದು ಆರೋಪಿಸಿದ ಅವರು, ಪರೀಕ್ಷೆಗಳಲ್ಲಿನ ಗೊಂದಲಗಳಿಗೆ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕೆಪಿಎಸ್ಸಿ ಹಾಗೂ ಕೆಇಎ ಪರೀಕ್ಷೆಗಳಲ್ಲಿ ಪದೇ ಪದೇ ತಪ್ಪುಗಳು ನಡೆಯುತ್ತಿದ್ದು, ಪ್ರಶ್ನೆ ಪತ್ರಿಕೆ ದೋಷಗಳು, ಪರೀಕ್ಷೆ ಮುಂದೂಡಿಕೆ, ಮರು ಪರೀಕ್ಷೆಗಳಂತಹ ಬೆಳವಣಿಗೆಗಳಿಂದ ವರ್ಷಗಳ ಕಾಲ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ಉದ್ಯೋಗಕ್ಕಾಗಿ ಬಡ ಹಾಗೂ ಮಧ್ಯಮ ವರ್ಗದ ಯುವಕರು ವರ್ಷಗಟ್ಟಲೆ ಪರಿಶ್ರಮ ಪಡುತ್ತಿದ್ದಾರೆ. ಆದರೆ ಸರ್ಕಾರ ನೇಮಕಾತಿ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಡೆಸದೆ ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿವೆ . ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು. ಕೇವಲ ಪತ್ರಿಕಾಗೋಷ್ಠಿಗಳಲ್ಲಿ ಹೇಳಿಕೆ ನೀಡುವುದನ್ನು ಬಿಟ್ಟು, ಭ್ರಷ್ಟಾಚಾರ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಪೂಜಾ ಪೈ , ರಣದೀಪ್ , ಜೀವನ್ ಕುಮಾರ್ ಸಾಹಿತ್ ಸಹಿತ ಮತ್ತಿತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!