ತಲಪಾಡಿ: ಮರಿಯಾಶ್ರಮ ಚರ್ಚ್ ಪರಿಸರದಲ್ಲಿ ಗುಡ್ಡೆ ಕುಸಿತ ಭೀತಿ; ಅಪಾಯದಂಚಿನಲ್ಲಿ 10 ಕುಟುಂಬಗಳು ಮತ್ತು ವಾಟರ್ ಟ್ಯಾಂಕ್

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್‌ನ ತಲಪಾಡಿ ಮರಿಯಾಶ್ರಮ ಚರ್ಚ್ ಪರಿಸರದಲ್ಲಿ ಅನಧಿಕೃತವಾಗಿ ಗುಡ್ಡೆ ಅಗೆದ ಪರಿಣಾಮ ಬೃಹತ್ ಗುಡ್ಡ ಜರಿದಿದ್ದು, ಸುತ್ತಮುತ್ತಲಿನ ಸುಮಾರು 10 ಕುಟುಂಬಗಳು ತೀವ್ರ ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತಿಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ಕೂಡ ಕುಸಿದು ಬೀಳುವ ಅಪಾಯದಲ್ಲಿದೆ.

ಯಾವುದೇ ಅನುಮತಿಯಿಲ್ಲದೆ ನಡೆಸಿದ ಅವೈಜ್ಞಾನಿಕ ಗುಡ್ಡೆ ಅಗೆತವೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ.
​ ಗುಡ್ಡ ಜರಿತದಿಂದ ಮೇಲ್ಭಾಗದಲ್ಲಿ ವಾಸಿಸುತ್ತಿರುವ ಸುಮಾರು 10 ಕುಟುಂಬಗಳ ಮನೆಗಳಿಗೆ ತೀವ್ರ ಅಪಾಯ ಎದುರಾಗಿದೆ. ಮಳೆ ಬಿರುಸು ಪಡೆಯುತ್ತಿರುವುದರಿಂದ ಈ ಕುಟುಂಬಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
​ ಜರಿದ ಗುಡ್ಡದ ಸಮೀಪದಲ್ಲೇ ತಲಪಾಡಿ ಗ್ರಾಮ ಪಂಚಾಯತ್ ಅಧೀನ1ದ ವಾಟರ್ ಟ್ಯಾಂಕ್ ಇದ್ದು, ಇದು ಕೂಡ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ. ಇದರಿಂದ ಸ್ಥಳೀಯರಿಗೆ ಕುಡಿಯುವ ನೀರಿನ ಸರಬರಾಜಿಗೂ ವ್ಯತ್ಯಯವಾಗುವ ಸಾಧ್ಯತೆಯಿದೆ.


​ಘಟನೆಯ ಗಂಭೀರತೆಯನ್ನು ಅರಿತ ಕೂಡಲೇ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಹಾಗೂ ಪಂಚಾಯತ್ ಸದಸ್ಯ ಇಲ್ಯಾಸ್ ತೂಮಿನಾಡು ನೇತೃತ್ವದ ಅಧಿಕಾರಿಗಳ ತಂಡವು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು, ಸಂತ್ರಸ್ತ ಕುಟುಂಬಗಳ ರಕ್ಷಣೆ ಮತ್ತು ತಾತ್ಕಾಲಿಕ ಪುನರ್ವಸತಿ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

​ಮಳೆ ಮತ್ತಷ್ಟು ತೀವ್ರಗೊಳ್ಳುವ ಮುನ್ನಾ ಜಿಲ್ಲಾ ಆಡಳಿತ ಮತ್ತು ಪಂಚಾಯತ್ ವತಿಯಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ವಾಟರ್ ಟ್ಯಾಂಕ್ ಅನ್ನು ಸುರಕ್ಷಿತಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!