ಮುಲ್ಕಿ, ಆ. 5: ಕೆ.ಎಸ್ ರಾವ್ ನಗರ ಬಸ್ ತಂಗುದಾಣದಿಂದ ರೈಲು ನಿಲ್ದಾಣದ ಹಾದಿಯಾಗಿ ಮೂಡಬಿದ್ರೆಗೆ ಸಾಗುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು, ಪಾದಚಾರಿಗಳು ಹಾಗೂ ಕಾರ್ಮಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆ ಗುಂಡಿಗಳಿಂದ ಕೂಡಿದ್ದು, ನೀರು ನಿಂತು ಅಪಘಾತಗಳ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮುಲ್ಕಿ ತಾಲೂಕು ಸಮಿತಿ ವತಿಯಿಂದ ಇಂದು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಈ ರಸ್ತೆ ಮೂಲಕ ಪ್ರತಿದಿನ ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ರೈಲು ಪ್ರಯಾಣಿಕರು ಸಂಚರಿಸುತ್ತಿದ್ದು, ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ SDTU ಮುಲ್ಕಿ ತಾಲೂಕು ಸಮಿತಿಯ ಅಧ್ಯಕ್ಷ ವಿಶುಕುಮಾರ್, ಜಿಲ್ಲಾ ಸಮಿತಿ ಸದಸ್ಯ ರಹೀಂ ಮುಲ್ಕಿ ಉಪಾಧ್ಯಕ್ಷ ರಾಜ್ ಮಹಮ್ಮದ್, ಕಾರ್ಯದರ್ಶಿ ಸಾಹಲಂ, ಕೋಶಾಧಿಕಾರಿ ಮನ್ಸೂರ್ ಹಾಗೂ ಸದಸ್ಯರಾದ ಅಬ್ಝಲ್ ಉಪಸ್ಥಿತರಿದ್ದರು.

