ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡು–ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್‌ಸಿಎಲ್ ಕಂಪನಿಯು ಪಾಣೆಮಂಗಳೂರು ಹಳೆಯ ಸೇತುವೆ ಸಮೀಪ ಲೀಸ್ ಆಧಾರದಲ್ಲಿ ಬಳಸುತ್ತಿದ್ದ ಖಾಸಗಿ ಜಾಗವನ್ನು ತೆರವುಗೊಳಿಸಿದೆ. ಇದರಿಂದ ಸಾರ್ವಜನಿಕರಲ್ಲಿ ಕಾಮಗಾರಿ ಅರ್ಧದಲ್ಲೇ ನಿಂತಿದೆಯೇ ಎಂಬ ಆತಂಕ ವ್ಯಕ್ತವಾಗಿದ್ದರೂ, ಅಂತಹ ಯಾವುದೇ ಭಯಕ್ಕೆ ಅವಕಾಶ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಪಾಣೆಮಂಗಳೂರು ಪ್ಲಾಂಟ್‌ನಲ್ಲಿ ಇರಿಸಲಾಗಿದ್ದ ಬಹುತೇಕ ಯಂತ್ರೋಪಕರಣಗಳನ್ನು ಸ್ಥಳಾಂತರಿಸಲಾಗಿದ್ದು, ಕಾಮಗಾರಿಯ ಸುಮಾರು 95 ಶೇಕಡಾ ಪೂರ್ಣಗೊಂಡಿರುವುದರಿಂದ ಅಗತ್ಯವಿಲ್ಲದ ಯಂತ್ರಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಉಳಿದಿರುವ ಕಾಮಗಾರಿಗಾಗಿ ಅಗತ್ಯ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳು ಉಪ್ಪಿನಂಗಡಿ ಸಮೀಪದ ಕಾಂಚನ ಮತ್ತು ನೆಕ್ಕಿಲಾಡಿ ಪ್ಲಾಂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಚತುಷ್ಪಥ ಯೋಜನೆಗಾಗಿ ಕಂಪನಿಯು ಒಟ್ಟು ಮೂರು ಪ್ಲಾಂಟ್‌ಗಳನ್ನು ಸ್ಥಾಪಿಸಿತ್ತು. ಪೆರ್ನೆವರೆಗೆ ಮುಖ್ಯ ಕಾಮಗಾರಿ ಪೂರ್ಣಗೊಂಡಿದ್ದು, ನೆಕ್ಕಿಲಾಡಿ ಸಮೀಪದ ಕಲ್ಲು ಬ್ಲಾಸ್ಟಿಂಗ್ ಪ್ರದೇಶದಲ್ಲಿ ಸ್ವಲ್ಪ ಕಾಮಗಾರಿ ಮಾತ್ರ ಬಾಕಿಯಿದೆ. ಅಲ್ಲದೆ ಚರಂಡಿ, ಸಂಪರ್ಕ ರಸ್ತೆ ಸೇರಿದಂತೆ ಕೆಲವು ಸಣ್ಣಪುಟ್ಟ ಕಾಮಗಾರಿಗಳು ನಿತ್ಯ ಮುಂದುವರಿಯುತ್ತಿವೆ.

ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ರಘುನಾಥ ರೆಡ್ಡಿ ಮಾತನಾಡಿ, “ಮಳೆ ಕಡಿಮೆಯಾದ ತಕ್ಷಣ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಬೀದಿ ದೀಪಗಳಿಗೆ ಮೆಸ್ಕಾಂ ಇಲಾಖೆಯಿಂದ ಅನುಮೋದನೆ ದೊರೆತ ಕೂಡಲೇ ದೀಪಗಳನ್ನು ಬೆಳಗಿಸಲಾಗುವುದು. ಸಂಪರ್ಕ ರಸ್ತೆಗಳು ಹಾಗೂ ಚರಂಡಿ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ರಸ್ತೆ ನಿರ್ಮಾಣ ಪೂರ್ಣಗೊಂಡ ಬಳಿಕವೂ ಮುಂದಿನ ಹತ್ತು ವರ್ಷಗಳ ಕಾಲ ರಸ್ತೆ ನಿರ್ವಹಣೆಯ ಜವಾಬ್ದಾರಿ ಕಂಪನಿಯದ್ದೇ ಆಗಿರುವುದರಿಂದ ಜಿಲ್ಲೆಯಲ್ಲಿ ಕಂಪನಿಯ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆದರೆ ಪಾಣೆಮಂಗಳೂರು ಪ್ಲಾಂಟ್ ತೆರವುಗೊಂಡಿರುವುದನ್ನು ಕಂಡ ಸಾರ್ವಜನಿಕರು, ಚರಂಡಿ, ಸಂಪರ್ಕ ರಸ್ತೆ, ತಡೆಗೋಡೆ, ಬೀದಿ ದೀಪ ಸೇರಿದಂತೆ ಇನ್ನೂ ಹಲವು ಕಾಮಗಾರಿಗಳು ಬಾಕಿ ಇರುವಾಗ ಕಂಪನಿ ಸ್ಥಳ ತೊರೆದಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಉಳಿದಿರುವ ಸಮಸ್ಯೆಗಳಿಗೆ ಕಂಪನಿ ಮತ್ತು ಸಂಬಂಧಿತ ಇಲಾಖೆ ಶೀಘ್ರ ಸ್ಪಂದಿಸಿ ಕಾಮಗಾರಿಯನ್ನು ಸಂಪೂರ್ಣ ಮುಕ್ತಾಯಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

