ಮಂಗಳೂರು: ವಯೋವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ದುರ್ಬಲ ವರ್ಗದವರಿಗೆ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಕರ್ನಾಟಕ ಸರ್ಕಾರ ವಾರ್ಷಿಕ ಕುಟುಂಬ ಆದಾಯವನ್ನು ಕೇವಲ ₹32,000ಕ್ಕೆ ಸೀಮಿತಗೊಳಿಸಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ .
ನಗರದ ಓಷನ್ ಪರ್ಲ್ ಹೋಟೆಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಂದ ₹32,000 ಆದಾಯ ಪ್ರಮಾಣಪತ್ರ ಕೇಳುವ ಮೂಲಕ ವಯೋವೃದ್ಧರು, ವಿಧವೆಯರು ಹಾಗೂ ಅಂಗವಿಕಲರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಲಾಗುತ್ತಿದೆ ಎಂದು ದೂರಿದರು.

ಸರ್ಕಾರದ ಕಲ್ಯಾಣ ಯೋಜನೆಗಳು ಜನರ ಹಕ್ಕಾಗಿರಬೇಕೇ ಹೊರತು ದಾಖಲೆಗಳ ಹೆಸರಿನಲ್ಲಿ ಜನರನ್ನು ಕಚೇರಿಗಳ ಸುತ್ತ ಅಲೆದಾಡಿಸುವ ವ್ಯವಸ್ಥೆಯಾಗಬಾರದು. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಸಂದರ್ಭದಲ್ಲಿ ಯಾವುದೇ ದಾಖಲೆಗಳ ಒತ್ತಡ ಇರಲಿಲ್ಲ. ಇದೀಗ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ದಾಖಲೆಗಳ ಹೆಸರಿನಲ್ಲಿ ಜನರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನಿಗದಿಪಡಿಸಿರುವ ₹32,000 ಆದಾಯ ಮಿತಿ ವಾಸ್ತವಿಕತೆಗೆ ದೂರವಾಗಿದೆ. ದಿನಗೂಲಿ ಕಾರ್ಮಿಕರ ವಾರ್ಷಿಕ ಆದಾಯವೇ ಸಾಮಾನ್ಯವಾಗಿ ₹1.5 ಲಕ್ಷದಿಂದ ₹2 ಲಕ್ಷದವರೆಗೆ ಇರಬಹುದಾಗಿದ್ದು, ಇಂತಹ ಸಂದರ್ಭದಲ್ಲಿ ₹32,000 ಆದಾಯ ಮಿತಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಅಬ್ದುಲ್ ಮಜೀದ್ ಹೇಳಿದರು.
ತೆಲಂಗಾಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮೀಣ ಪ್ರದೇಶದಲ್ಲಿ ₹1.5 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ₹2 ಲಕ್ಷದವರೆಗೆ ಆದಾಯ ಮಿತಿ ಇದೆ. ಹರಿಯಾಣದಲ್ಲಿ ₹3 ಲಕ್ಷದವರೆಗೆ ಹಾಗೂ ಕೇರಳದಲ್ಲಿ ₹1 ಲಕ್ಷದವರೆಗೆ ವಾರ್ಷಿಕ ಕುಟುಂಬ ಆದಾಯವನ್ನು ಮಾನದಂಡವಾಗಿ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅದೇ ರೀತಿ, ಹಲವು ರಾಜ್ಯಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತವೂ ಕರ್ನಾಟಕಕ್ಕಿಂತ ಹೆಚ್ಚಾಗಿದೆ. ಕರ್ನಾಟಕದಲ್ಲಿ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಪಿಂಚಣಿ ಮೊತ್ತ ಕಡಿಮೆ ಇದ್ದು, ಫಲಾನುಭವಿಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಬಿಪಿಎಲ್ ಮಾನದಂಡದಲ್ಲೂ ದ್ವಂದ್ವ ನೀತಿ ಆರೋಪ …. !
ಕರ್ನಾಟಕದಲ್ಲಿ ಪ್ರಸ್ತುತ ಬಿಪಿಎಲ್ ಕಾರ್ಡ್‌ಗೆ ₹1.20 ಲಕ್ಷ ಆದಾಯ ಮಿತಿ ಇದೆ. ಇದನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿರುವುದನ್ನು ಉಲ್ಲೇಖಿಸಿದ ಅಬ್ದುಲ್ ಮಜೀದ್, ಒಂದೆಡೆ ಬಿಪಿಎಲ್ ಮಾನದಂಡವನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸುತ್ತಿರುವ ಸರ್ಕಾರ ಮತ್ತೊಂದೆಡೆ ಸಾಮಾಜಿಕ ಭದ್ರತಾ ಪಿಂಚಣಿಗೆ ಕೇವಲ ₹32,000 ಆದಾಯ ಮಿತಿ ವಿಧಿಸಿರುವುದು ದ್ವಂದ್ವ ನೀತಿಯಾಗಿದೆ ಎಂದು ಟೀಕಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳಿಗೆ ಪ್ರತ್ಯೇಕ ಹಾಗೂ ಅವೈಜ್ಞಾನಿಕ ಆದಾಯ ಮಿತಿ ನಿಗದಿಪಡಿಸುವ ಬದಲು, ರಾಜ್ಯಾದ್ಯಂತ ಒಂದೇ ಸಾಮಾನ್ಯ ಮಾನದಂಡವನ್ನು ಜಾರಿಗೊಳಿಸಬೇಕು. ಪ್ರಸ್ತುತ ಜೀವನಮಟ್ಟ, ದಿನಗೂಲಿ ಹಾಗೂ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಬಿಪಿಎಲ್ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸಿ, ಅದನ್ನೇ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೂ ಮಾನದಂಡವನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ …. !
ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಂದ ವಿವಿಧ ದಾಖಲೆಗಳನ್ನು ಕೇಳುತ್ತಿರುವುದರಿಂದ ವಯೋವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಯ ಪ್ರಮಾಣಪತ್ರ ಸೇರಿದಂತೆ ದಾಖಲೆಗಳನ್ನು ಪಡೆಯಲು ವಿಳಂಬವಾಗುತ್ತಿದ್ದು, ಇದರಿಂದ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು .
ದಾಖಲೆಗಳ ಹೆಸರಿನಲ್ಲಿ ಜನರನ್ನು ಕಚೇರಿಗಳಿಗೆ ಅಲೆದಾಡಿಸುವ ಬದಲು, ಸರ್ಕಾರವೇ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯವನ್ನು ಖಚಿತಪಡಿಸಬೇಕು. ಈ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶವಾಗುವ ಪರಿಸ್ಥಿತಿಯನ್ನು ತಪ್ಪಿಸಬೇಕು ಎಂದು ಅವರು ಹೇಳಿದರು .
ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಯಂಗ್ ಡೆಮಾಕ್ರಟ್ಸ್ – ದಕ್ಷಿಣ ಕನ್ನಡ ಜಿಲ್ಲಾ ಯುವ ಅಸೆಂಬ್ಲಿ ನಾಳೆ ಉದ್ಘಾಟನೆಗೊಳ್ಳಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಜಿಲ್ಲಾಧ್ಯಕ್ಷ ಅಶ್ರಫ್ ಅಡ್ದುರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ** ಉಪಸ್ಥಿತರಿದ್ದರು.

