ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸಲು ಯತ್ನ: ಪೈವಳಿಕೆ ಪಂಚಾಯತ್ ಸದಸ್ಯನ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಕಾಸರಗೋಡು:ಕಾರಿನಲ್ಲಿ ಮಾದಕವಸ್ತುಗಳನ್ನು ಬಚ್ಚಿಟ್ಟು ಪ್ರಕರಣದಲ್ಲಿ ಸಿಲುಕಿಸಲು ಹಾಗೂ ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಲಾಗಿದೆ ಎಂದು ಆರೋಪಿಸಿ ಪೈವಳಿಕೆ ಪಂಚಾಯತ್ ಸದಸ್ಯ ಸಕರಿಯ್ಯ (ಜೆಕ್ಕಿ) ವಿರುದ್ಧ ದೂರು ನೀಡಲಾಗಿದೆ. ಚಿಪ್ಪಾರ್ ನಿವಾಸಿ ಉಮ್ಮರ್ ಫಾರುಖ್ ಅವರು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ತಮ್ಮ ಮಾಲೀಕತ್ವದ ಆಲ್ಟೊ ಕಾರು (KL 14 AE 1898)ನಲ್ಲಿ ಮಾದಕವಸ್ತುಗಳಿವೆ ಎಂದು ತೋರಿಸಿ, ಪೊಲೀಸರಿಗೆ ನಿರಂತರವಾಗಿ ಸುಳ್ಳು ದೂರುಗಳನ್ನು ನೀಡಿ ವಾಹನವನ್ನು ಪರಿಶೀಲಿಸುವಂತೆ ಮಾಡಲಾಗುತ್ತಿದೆ. ಈ ಮೂಲಕ ತಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಉಮ್ಮರ್ ಫಾರುಖ್ ದೂರಿನಲ್ಲಿ ತಿಳಿಸಿದ್ದಾರೆ.

ಗಲ್ಫ್ ದೇಶಗಳ ನಂಬರ್‌ಗಳಿಂದ ಜನರಿಗೆ ಕರೆ ಮಾಡಿಸಿ, ಕೇರಳ ಹಾಗೂ ಕರ್ನಾಟಕ ಪೊಲೀಸರಿಗೆ ತಪ್ಪು ಮಾಹಿತಿಗಳನ್ನು ನೀಡಿ ತಮ್ಮನ್ನು ನಿರಂತರವಾಗಿ ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದಲ್ಲದೆ, ತಮ್ಮ ಕಾರಿನಲ್ಲಿ ಮಾದಕವಸ್ತುಗಳನ್ನು ಬಚ್ಚಿಡಲು ಪೆರುವಡಿ ನಿವಾಸಿ ಅಜೀಜ್ ಎಂಬಾತನನ್ನು ಸಕರಿಯ್ಯ ಕಳುಹಿಸಿದ್ದರು. ಈ ವಿಷಯವನ್ನು ಅಜೀಜ್ ಸ್ವತಃ ತಮ್ಮ ಬಳಿ ಬಂದು ತಿಳಿಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ತಮ್ಮನ್ನು ಮಾದಕವಸ್ತು ವ್ಯಾಪಾರಿ ಎಂಬಂತೆ ಬಿಂಬಿಸಿ, ಸ್ಥಳೀಯರು ಹಾಗೂ ಸಂಬಂಧಿಕರ ಮುಂದೆ ಅವಮಾನಿಸಲು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಮ್ಮರ್ ಫಾರುಖ್ ದೂರಿನಲ್ಲಿ ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!