ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪನೆಗೆ ಆಗ್ರಹ

ಮಂಗಳೂರು: ಕರಾವಳಿ ಭಾಗದ ಜನರ ಪಾಸ್‌ಪೋರ್ಟ್ ಸೇವೆಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1988ರಲ್ಲಿ ಮೊದಲ ಬಾರಿಗೆ ಪಾಸ್‌ಪೋರ್ಟ್ ಕಚೇರಿ ಆರಂಭಿಸಲಾಗಿತ್ತು. ಬಳಿಕ 2014ರಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದರು.

ದೇಶದಲ್ಲಿ ಒಟ್ಟು 37 ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಿವೆ. ಹಲವು ರಾಜ್ಯಗಳಲ್ಲಿ ಒಂದೆರಡು ಪ್ರಾದೇಶಿಕ ಕಚೇರಿಗಳಿದ್ದರೆ, ಕೇರಳ ಮತ್ತು ತಮಿಳುನಾಡಿನಲ್ಲಿ ತಲಾ ಮೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಿವೆ. ಕೇರಳದಲ್ಲಿ 19 ಹಾಗೂ ತಮಿಳುನಾಡಿನಲ್ಲಿ 32 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿವೆ. ಆದರೆ ಕರ್ನಾಟಕದಲ್ಲಿ ಕೇವಲ ಐದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿದ್ದು, ಬೆಂಗಳೂರಿನಲ್ಲಿ ಎರಡು, ಹುಬ್ಬಳ್ಳಿ, ಕಲಬುರಗಿ ಹಾಗೂ ಮಂಗಳೂರಿನಲ್ಲಿ ತಲಾ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಿವರಿಸಿದರು.

ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಸ್ವತಂತ್ರ ಪ್ರಾದೇಶಿಕ ಕಚೇರಿಗಳಲ್ಲ. ಇಲ್ಲಿ ಅರ್ಜಿಗಳನ್ನು ಸ್ವೀಕರಿಸುವುದು, ದಾಖಲೆಗಳನ್ನು ಪರಿಶೀಲಿಸುವುದು ಹಾಗೂ ಬಳಿಕ ಅವುಗಳನ್ನು ರಾಜ್ಯದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಕಳುಹಿಸುವ ಕಾರ್ಯ ನಡೆಯುತ್ತದೆ. ಹೀಗಾಗಿ ಮಂಗಳೂರಿನಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪನೆಯಾದರೆ ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಲಾರೆನ್ಸ್ ಡಿಸೋಜಾ ಹೇಳಿದರು.

ಎಂಟು ಜಿಲ್ಲೆಗಳ ಜನರಿಗೆ ಮಂಗಳೂರು ಕೇಂದ್ರ

ಮಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾರವಾರ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಿಂದ ಜನರು ಆಗಮಿಸುತ್ತಾರೆ. ಸಾಮಾನ್ಯ ಪಾಸ್‌ಪೋರ್ಟ್ ಮಾತ್ರವಲ್ಲದೆ ತತ್ಕಾಲ್ ಪಾಸ್‌ಪೋರ್ಟ್, ಪೊಲೀಸ್ ಪರಿಶೀಲನೆ, ಪಾಸ್‌ಪೋರ್ಟ್ ನವೀಕರಣ ಹಾಗೂ ದಾಖಲೆಗಳ ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳಿಗೆ ಜನರು ಮಂಗಳೂರಿನ ಕೇಂದ್ರವನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 2020ರಿಂದ 2025ರ ಅವಧಿಯಲ್ಲಿ ಸುಮಾರು 10,01,273 ಅರ್ಜಿಗಳು ಬಂದಿದ್ದು, ಸುಮಾರು 9,85,831 ಪಾಸ್‌ಪೋರ್ಟ್ ಹಾಗೂ ಇತರ ಸೇವೆಗಳ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ರಾಜ್ಯದ ಒಂದೇ ಪ್ರಾದೇಶಿಕ ಕಚೇರಿಯ ಮೇಲೆ ಇಷ್ಟೊಂದು ಪ್ರಮಾಣದ ಅರ್ಜಿಗಳ ಹೊರೆ ಬೀಳುತ್ತಿದೆ. ಇದಕ್ಕೆ ಹೋಲಿಸಿದರೆ ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಾದೇಶಿಕ ಕಚೇರಿಗಳಿರುವುದರಿಂದ ಸೇವಾ ವಿತರಣೆಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.

ದಿನಕ್ಕೆ 600 ಅರ್ಜಿಗಳ ವಿಲೇವಾರಿ

ಮಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸರಾಸರಿ ದಿನಕ್ಕೆ ಸುಮಾರು 600 ಅರ್ಜಿಗಳು ಬರುತ್ತವೆ. ಬೆಳಗ್ಗೆ 9.30ರಿಂದ ಸಂಜೆ 5.30 ಅಥವಾ 6 ಗಂಟೆಯವರೆಗೆ ಅರ್ಜಿಗಳ ವಿಲೇವಾರಿ ನಡೆಯುತ್ತಿದ್ದು, ಪ್ರತಿ ಗಂಟೆಗೆ ಸರಾಸರಿ 75 ಅರ್ಜಿಗಳನ್ನು ನಿರ್ವಹಿಸುವ ಒತ್ತಡವಿದೆ ಎಂದು ಲಾರೆನ್ಸ್ ಡಿಸೋಜಾ ಹೇಳಿದರು.

ಕೇಂದ್ರದಲ್ಲಿ A, B ಹಾಗೂ C ಎಂಬ ಮೂರು ಹಂತಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತದೆ. A ಕೌಂಟರ್‌ನಲ್ಲಿ ಸುಮಾರು 10 ಟೇಬಲ್‌ಗಳಿದ್ದರೂ 6ರಿಂದ 8 ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಾರೆ. B ಕೌಂಟರ್‌ನಲ್ಲೂ ಸುಮಾರು 10 ಕೌಂಟರ್‌ಗಳಿದ್ದು, ಕೆಲವೇ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. C ಕೌಂಟರ್‌ನಲ್ಲಿಯೂ ಸಿಬ್ಬಂದಿ ಕೊರತೆಯಿದೆ. ಇದರಿಂದ ಅರ್ಜಿದಾರರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಬೆಳಗ್ಗೆ 9.30ಕ್ಕೆ ಕೇಂದ್ರಕ್ಕೆ ತೆರಳಿದ ವ್ಯಕ್ತಿಯೊಬ್ಬರು ಪ್ರಕ್ರಿಯೆ ಪೂರ್ಣಗೊಳಿಸಿ ಹೊರಬರಲು ಸರಾಸರಿ ಮೂರು ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಈ ಅವಧಿಯಲ್ಲಿ ಸುಮಾರು 200ರಿಂದ 250 ಮಂದಿ ಕೇಂದ್ರದ ಒಳಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಕುಳಿತುಕೊಳ್ಳಲು ಸೀಮಿತ ಪ್ರಮಾಣದ ಆಸನ ವ್ಯವಸ್ಥೆ ಮಾತ್ರ ಇರುವುದರಿಂದ ಉಳಿದವರು ನಿಂತುಕೊಂಡೇ ಕಾಯಬೇಕಾಗಿದೆ. ವೃದ್ಧರು, ಮಕ್ಕಳು ಹಾಗೂ ಮಹಿಳೆಯರೂ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

2,500–2,800 ಚದರ ಅಡಿ ಜಾಗದಲ್ಲಿ ಭಾರೀ ಒತ್ತಡ

ಮಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರವು ಸುಮಾರು 2,500ರಿಂದ 2,800 ಚದರ ಅಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ದಿನಕ್ಕೆ ಸುಮಾರು 600 ಅರ್ಜಿದಾರರು ಆಗಮಿಸುವ ಹಿನ್ನೆಲೆಯಲ್ಲಿ ಇಷ್ಟು ಸೀಮಿತ ಸ್ಥಳದಲ್ಲಿ ಭಾರೀ ಜನದಟ್ಟಣೆ ಉಂಟಾಗುತ್ತಿದೆ. ಕೇಂದ್ರದ ಹೊರಭಾಗದಲ್ಲಿಯೂ ಜನರು ಮುಂಚಿತವಾಗಿ ಬಂದು ಕಾಯುತ್ತಾರೆ. ಆದರೆ ಅಲ್ಲಿ ಸೂಕ್ತ ನೆರಳು, ಕುಳಿತುಕೊಳ್ಳಲು ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಲಾರೆನ್ಸ್ ಡಿಸೋಜಾ ದೂರಿದರು.

ಅರ್ಜಿದಾರರನ್ನು ಕೌಂಟರ್‌ಗಳಿಗೆ ಕರೆಯುವಲ್ಲಿಯೂ ಸೂಕ್ತ ಕ್ರಮ ಅನುಸರಿಸಲಾಗುತ್ತಿಲ್ಲ. A ಕೌಂಟರ್‌ನ ಪ್ರಕ್ರಿಯೆ ಮುಗಿದ ಬಳಿಕ B ಕೌಂಟರ್‌ಗೆ ಅರ್ಜಿದಾರರನ್ನು ಕ್ರಮಬದ್ಧವಾಗಿ ಕರೆಯುವ ಬದಲು ಒಟ್ಟಿಗೆ ಹಲವು ಟೋಕನ್‌ಗಳನ್ನು ಕರೆಯಲಾಗುತ್ತದೆ. ಇದರಿಂದ ಮತ್ತಷ್ಟು ಗೊಂದಲ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು.

ಜೆರಾಕ್ಸ್‌ಗೂ ಡಿಜಿಟಲ್ ಪಾವತಿ ವ್ಯವಸ್ಥೆ ಇಲ್ಲ

ದಾಖಲೆ ಪರಿಶೀಲನೆ ವೇಳೆ ಜೆರಾಕ್ಸ್ ಪ್ರತಿಗಳ ಅಗತ್ಯವಿದ್ದಲ್ಲಿ ಅರ್ಜಿದಾರರಿಗೆ ಕೇಂದ್ರದೊಳಗಿನ ಜೆರಾಕ್ಸ್ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗುತ್ತದೆ. ಪ್ರತಿ ಪುಟಕ್ಕೆ 10 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಜೆರಾಕ್ಸ್ ಕೇಂದ್ರದಲ್ಲಿ ಗೂಗಲ್ ಪೇ ಅಥವಾ ಫೋನ್‌ಪೇ ಮೂಲಕ ಪಾವತಿ ಮಾಡುವ ವ್ಯವಸ್ಥೆ ಇಲ್ಲ. ಡಿಜಿಟಲ್ ಪಾವತಿಯೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಅರ್ಜಿದಾರರು ನಗದು ಹಣಕ್ಕಾಗಿ ಪರದಾಡುವಂತಾಗಿದೆ ಎಂದು ಅವರು ಹೇಳಿದರು.

ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿನ ಸಿಬ್ಬಂದಿ ಕೊರತೆ, ಸೀಮಿತ ಸ್ಥಳಾವಕಾಶ, ಆಸನ ಹಾಗೂ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲಾರೆನ್ಸ್ ಡಿಸೋಜಾ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶುಭಾಷ್ ಚಂದ್ರ, ವಹಾಬ್, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!