ತಿರಂಗ ವಾಹನ ಜಾಥಕ್ಕೆ ಪೊಲೀಸ್ ಅನುಮತಿ: ಗೊಂದಲ ಬೇಡ ಸುದರ್ಶನ ಬಜ…

ಬಂಟ್ವಾಳ: ಅಗಸ್ಟ್ 13ರಂದು ನಡೆಯಲಿರುವ ತ್ರಿರಂಗ ವಾಹನ ಜಾಥಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆತಿದ್ದು, ಕಾರ್ಯಕ್ರಮವು ನಿಗದಿತ ನಿಯಮ ಹಾಗೂ ಕಾನೂನುಬದ್ಧವಾಗಿ ನಡೆಯಲಿದೆ ಎಂದು ಬಂಟ್ವಾಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ತಿಳಿಸಿದ್ದಾರೆ.
ಅಗಸ್ಟ್ 13 ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ ಆರಂಭಗೊಂಡು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸಮಾಪ್ತಿಗೊಳ್ಳಲಿದೆ.


ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರು ವಾಹನ ಜಾಥಕ್ಕೆ ಚಾಲನೆ ನೀಡಲಿದ್ದಾರೆ.
ತ್ರಿರಂಗ ವಾಹನ ಜಾಥಕ್ಕೆ ಅನುಮತಿ ಕೋರಿ ಕಾರ್ಯಕ್ರಮದ ಸಂಘಟಕರು ಅಗಸ್ಟ್ 10ರಂದು ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಗಸ್ಟ್ 11 ರಂದು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಅನುಮತಿ ಪಡೆಯದೆ ವಾಹನ ಜಾಥ ನಡೆಸಲಾಗುತ್ತಿದೆ ಎಂಬ ಮಾಹಿತಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ವಾಹನ ಜಾಥ ನಡೆಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ನೀಡಿತ್ತು. ಈ ಪ್ರಕಟಣೆ ಮಾಧ್ಯಮಗಳಲ್ಲಿಯೂ ಪ್ರಕಟವಾಗಿತ್ತು.


ಇದರ ಬಳಿಕ ಕಾರ್ಯಕ್ರಮದ ಸಂಘಟಕರು ಹಾಗೂ ಪೊಲೀಸ್ ಇಲಾಖೆಯ ನಡುವೆ ಅನುಮತಿ ಕುರಿತು ಮಾತುಕತೆ ನಡೆದಿದ್ದು, ಅಗಸ್ಟ್ 12 ರಂದು ಪೊಲೀಸ್ ಇಲಾಖೆ ತ್ರಿರಂಗ ವಾಹನ ಜಾಥಕ್ಕೆ ಅನುಮತಿ ನೀಡಿದೆ. ಹೀಗಾಗಿ ಕಾರ್ಯಕ್ರಮದ ಕುರಿತು ಯಾವುದೇ ಗೊಂದಲ ಅಥವಾ ಅನುಮಾನ ಬೇಡ ಎಂದು ಸುದರ್ಶನ ಬಜ ಸ್ಪಷ್ಟಪಡಿಸಿದ್ದಾರೆ.
ದೇಶಭಕ್ತಿಯ ಸಂದೇಶ ಸಾರುವ ಉದ್ದೇಶದಿಂದ ನಡೆಯುವ ತ್ರಿರಂಗ ವಾಹನ ಜಾಥದಲ್ಲಿ ತಾಲೂಕಿನ ದೇಶಭಕ್ತ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ. ವಾಹನ ಜಾಥವು ಪೊಲೀಸ್ ಇಲಾಖೆ ಸೂಚಿಸಿರುವ ನಿಯಮ, ಷರತ್ತುಗಳು ಹಾಗೂ ಕಾನೂನುಬದ್ಧ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಶಾಂತಿಯುತವಾಗಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿಂದಿನ ಮಾಹಿತಿಯನ್ನು ಆಧರಿಸಿ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಪೊಲೀಸ್ ಇಲಾಖೆಯಿಂದ ಅಧಿಕೃತವಾಗಿ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಅಗಸ್ಟ್ 13ರಂದು ತ್ರಿರಂಗ ವಾಹನ ಜಾಥ ನಿಗದಿಯಂತೆ ನಡೆಯಲಿದೆ. ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸುದರ್ಶನ ಬಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!