ಮಲಪ್ಪುರಂ : ಮಲಪ್ಪುರಂ ತಾನೂರಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಮಾದಕವಸ್ತು ಪ್ರಕರಣದ ಆರೋಪಿ ತಾಮಿರ್ ಜಿಫ್ರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಿಸಿಟಿವಿ ದೃಶ್ಯಗಳು ಇದೀಗ ಬಹಿರಂಗವಾಗಿವೆ.

ತಾಮಿರ್ ಜಿಫ್ರಿ ಮೃತಪಟ್ಟ ರಾತ್ರಿ ತಾನೂರು ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಗಳು ಹೊರಬಂದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ಹೊತ್ತುಕೊಂಡು ಹೋಗಿ ಪೊಲೀಸ್ ಜೀಪ್ಗೆ ಹತ್ತಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಜೀಪ್ಗೆ ಹತ್ತಿಸಿದ ಬಳಿಕವೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿರುವುದು ದೃಶ್ಯಗಳಿಂದ ಸ್ಪಷ್ಟವಾಗಿದೆ.

ಬೆಳಗಿನ 4.18ಕ್ಕೆ ತಾಮಿರ್ ಜಿಫ್ರಿಯನ್ನು ಜೀಪ್ಗೆ ಹತ್ತಿಸಲಾಗಿದ್ದು, ಜೀಪ್ 4.23ಕ್ಕೆ ಅಂದರೆ ಐದು ನಿಮಿಷಗಳ ಬಳಿಕ ಠಾಣೆಯಿಂದ ಹೊರಟಿದೆ. ಕುಟುಂಬವು ಮೂರು ವರ್ಷಗಳಿಂದ ನಡೆಸಿದ ಕಾನೂನು ಹೋರಾಟದ ಬಳಿಕ ಇದೀಗ ಠಾಣೆಯ ಹೊರಭಾಗದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ.

2023ರ ಆಗಸ್ಟ್ 1ರಂದು ತಾನೂರು ಪೊಲೀಸರು ತಾಮಿರ್ ಜಿಫ್ರಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಅವರು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅವರ ದೇಹದ ಮೇಲೆ 21 ಗಾಯದ ಗುರುತುಗಳು ಇದ್ದವು ಎಂದು ಉಲ್ಲೇಖಿಸಲಾಗಿದೆ. ಅವುಗಳಲ್ಲಿ 19 ಗಾಯಗಳು ಸಾವಿಗೂ ಮುನ್ನ ಹಾಗೂ 2 ಗಾಯಗಳು ಸಾವಿನ ಬಳಿಕ ಸಂಭವಿಸಿದ್ದವು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಕ್ರೈಂ ಬ್ರಾಂಚ್ ನಡೆಸಿತ್ತು. ತನಿಖೆಯಿಂದ ತೃಪ್ತರಾಗದ ಕುಟುಂಬವು ನಡೆಸಿದ ಕಾನೂನು ಹೋರಾಟದ ಬಳಿಕ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಈ ಪ್ರಕರಣದಲ್ಲಿ ಎಂಟು ಪೊಲೀಸ್ ಸಿಬ್ಬಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿ ಕ್ರೈಂ ಬ್ರಾಂಚ್ ಆರೋಪಪಟ್ಟಿ ಸಲ್ಲಿಸಿತ್ತು.

