ಅಜ್ಮಾನ್/ಟಾರ್ಗು ಮುರೆಶ್ (ರೊಮೇನಿಯಾ)ಆ.19: ವೈದ್ಯಕೀಯ ಪದವೀಧರರಿಗೆ ಯುರೋಪಿಯನ್ ಮಟ್ಟದ ವಿಶೇಷ ವೈದ್ಯಕೀಯ ತರಬೇತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ತುಂಬೆ ಗ್ರೂಪ್ ಹಾಗೂ ರೊಮೇನಿಯಾದ ಜಾರ್ಜ್ ಎಮಿಲ್ ಪಲಾಡೆ ಯೂನಿವರ್ಸಿಟಿ ಆಫ್ ಮೆಡಿಸಿನ್, ಫಾರ್ಮಸಿ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಆಫ್ ಟಾರ್ಗು ಮುರೆಶ್ (UMFST) ಜಂಟಿಯಾಗಿ **‘ತುಂಬೆ–UMFST ಇಂಟರ್ನ್ಯಾಷನಲ್ ರೆಸಿಡೆನ್ಸಿ ಪಾಥ್ವೇ ಪ್ರೋಗ್ರಾಂ’ ಆರಂಭಿಸಿದೆ.

ಈ ಕಾರ್ಯಕ್ರಮದ ಮೂಲಕ ಅರ್ಹ ವೈದ್ಯಕೀಯ ಪದವೀಧರರಿಗೆ ರೊಮೇನಿಯಾ ಮತ್ತು ಯುರೋಪಿಯನ್ ಆರೋಗ್ಯ ವ್ಯವಸ್ಥೆಗಳ ಮಾನ್ಯತೆಗೆ ಒಳಪಟ್ಟ 49 ವೈದ್ಯಕೀಯ ವಿಶೇಷತೆಗಳಲ್ಲಿ ರೆಸಿಡೆನ್ಸಿ ತರಬೇತಿ ಪಡೆಯಲು ಅವಕಾಶ ದೊರೆಯಲಿದೆ.
ಕಾರ್ಡಿಯಾಲಜಿ, ನ್ಯೂರಾಲಜಿ, ಸೈಕಿಯಾಟ್ರಿ, ತುರ್ತು ವೈದ್ಯಕೀಯ, ಮಕ್ಕಳ ವೈದ್ಯಕೀಯ ಸೇರಿದಂತೆ 28 ಕ್ಲಿನಿಕಲ್ ವಿಶೇಷತೆಗಳು, ಜನರಲ್ ಸರ್ಜರಿ, ಆರ್ಥೋಪೆಡಿಕ್ಸ್, ನ್ಯೂರೋಸರ್ಜರಿ, ಕಾರ್ಡಿಯೊವಾಸ್ಕ್ಯುಲರ್ ಸರ್ಜರಿ ಸೇರಿದಂತೆ 13 ಶಸ್ತ್ರಚಿಕಿತ್ಸಾ ವಿಶೇಷತೆಗಳು ಹಾಗೂ ರೇಡಿಯಾಲಜಿ, ಮೆಡಿಕಲ್ ಇಮೇಜಿಂಗ್, ಲ್ಯಾಬೊರೇಟರಿ ಮೆಡಿಸಿನ್ ಮತ್ತು ಸಾರ್ವಜನಿಕ ಆರೋಗ್ಯ ಸೇರಿದಂತೆ 8 ಪ್ಯಾರಾಕ್ಲಿನಿಕಲ್ ವಿಶೇಷತೆಗಳು ಕಾರ್ಯಕ್ರಮದಲ್ಲಿ ಒಳಗೊಂಡಿವೆ.
ವಿಶೇಷತೆಯ ಆಧಾರದ ಮೇಲೆ ರೆಸಿಡೆನ್ಸಿ ತರಬೇತಿಯ ಅವಧಿ ನಾಲ್ಕರಿಂದ ಆರು ವರ್ಷಗಳವರೆಗೆ ಇರಲಿದೆ. ರೊಮೇನಿಯಾ ಆರೋಗ್ಯ ಸಚಿವಾಲಯದ ನಿಯಮಗಳನ್ವಯ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಸಂಬಂಧಿತ ಬೋಧನಾ ಆಸ್ಪತ್ರೆಗಳಲ್ಲಿ ಅನುಭವಿ ಪ್ರಾಧ್ಯಾಪಕರು ಮತ್ತು ವೈದ್ಯಕೀಯ ಮಾರ್ಗದರ್ಶಕರ ಮೇಲ್ವಿಚಾರಣೆಯಲ್ಲಿ ತರಬೇತಿ ನಡೆಯಲಿದೆ.

ಅಭ್ಯರ್ಥಿಗಳು ತಮ್ಮ ಆದ್ಯತೆಯಂತೆ ಎರಡು ಅಥವಾ ಮೂರು ವಿಶೇಷತೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ತರಬೇತಿ ಸಾಮರ್ಥ್ಯ, ವಿಶೇಷತೆಯ ಲಭ್ಯತೆ ಹಾಗೂ ರೊಮೇನಿಯಾ ಸಂಬಂಧಿತ ಅಧಿಕಾರಿಗಳ ನಿಯಮಗಳಿಗೆ ಒಳಪಟ್ಟು ಅಭ್ಯರ್ಥಿಗಳ ಆದ್ಯತೆಯನ್ನು ಪರಿಗಣಿಸಿ ಪ್ರವೇಶ ನೀಡಲಾಗುವುದು.
ವೈದ್ಯಕೀಯ ಪದವೀಧರರಿಗೆ ಪ್ರಾದೇಶಿಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲಿರುವ ತುಂಬೆ ಗ್ರೂಪ್, ರೆಸಿಡೆನ್ಸಿಗೆ ಮುನ್ನದ ಮಾರ್ಗದರ್ಶನ, ಪ್ರವೇಶ ಪ್ರಕ್ರಿಯೆ, ವೀಸಾ ಮತ್ತು ದಾಖಲೆಗಳ ಸಹಾಯ, ಅಗತ್ಯವಿದ್ದಲ್ಲಿ ರೊಮೇನಿಯನ್ ಭಾಷಾ ತರಬೇತಿ, ವೃತ್ತಿ ಮಾರ್ಗದರ್ಶನ ಹಾಗೂ ರೆಸಿಡೆನ್ಸಿ ಅವಧಿಯಲ್ಲಿನ ನಿರಂತರ ವಿದ್ಯಾರ್ಥಿ ಬೆಂಬಲ ಸೇರಿದಂತೆ ಸಮಗ್ರ ನೆರವು ಒದಗಿಸಲಿದೆ.
ತುಂಬೆ ಗ್ರೂಪ್ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮಾತನಾಡಿ, “ಪ್ರತಿ ವರ್ಷ ನಮ್ಮ ಪ್ರದೇಶದ ಸಾವಿರಾರು ಪ್ರತಿಭಾವಂತ ವೈದ್ಯಕೀಯ ಪದವೀಧರರು ವಿಶೇಷ ತರಬೇತಿಗೆ ಸ್ಪಷ್ಟ ಮಾರ್ಗವನ್ನು ಹುಡುಕುತ್ತಿದ್ದಾರೆ. ಈ ಕಾರ್ಯಕ್ರಮ ಅವರಿಗೆ 49 ವಿಶೇಷತೆಗಳ ಆಯ್ಕೆಯೊಂದಿಗೆ ಯುರೋಪಿಯನ್ ಕ್ಲಿನಿಕಲ್ ಮಾನದಂಡಗಳು ಮತ್ತು ಮಾನ್ಯತೆ ಪಡೆದ ಬೋಧನಾ ಆಸ್ಪತ್ರೆಗಳಲ್ಲಿ ತರಬೇತಿ ಪಡೆಯುವ ಅವಕಾಶ ಕಲ್ಪಿಸುತ್ತದೆ. UMFST ಸಹಭಾಗಿತ್ವದಲ್ಲಿ ತುಂಬೆ ಗ್ರೂಪ್ ಪ್ರತಿಯೊಂದು ಹಂತದಲ್ಲೂ ಅಭ್ಯರ್ಥಿಗಳೊಂದಿಗೆ ಇರಲಿದೆ,” ಎಂದರು.

UMFST ರೆಕ್ಟರ್ ಪ್ರೊ. ಡಾ. ಲಿಯೊನಾರ್ಡ್ ಅಜಾಮ್ಫಿರೇಯಿ ಮಾತನಾಡಿ, “ಗಲ್ಫ್ ಪ್ರದೇಶದ ಅಭ್ಯರ್ಥಿಗಳಿಗೆ ರೆಸಿಡೆನ್ಸಿ ತರಬೇತಿಯ ಅವಕಾಶ ಕಲ್ಪಿಸುವ ಈ ಸಹಭಾಗಿತ್ವವು ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣದಲ್ಲಿ ದೀರ್ಘಕಾಲೀನ ಸೇತುವೆ ನಿರ್ಮಿಸುವ ಮಹತ್ವದ ಹೆಜ್ಜೆಯಾಗಿದೆ,” ಎಂದು ಹೇಳಿದರು.
ಈ ಪಾಥ್ವೇ ಮೂಲಕ MD ಪದವಿ ಪೂರ್ಣಗೊಳಿಸಿದ ಬಳಿಕ ಕಡ್ಡಾಯ ರೋಟೇಟಿಂಗ್ ಇಂಟರ್ನ್ಶಿಪ್ ಪೂರ್ಣಗೊಳಿಸದೆ ನೇರವಾಗಿ ರೆಸಿಡೆನ್ಸಿಗೆ ಪ್ರವೇಶಿಸುವ ಅವಕಾಶ ಲಭ್ಯವಿದೆ ಎಂದು ಸಂಸ್ಥೆಗಳು ತಿಳಿಸಿವೆ. ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ MD ಪದವೀಧರರು ಹಾಗೂ ತುಂಬೆ ಇಂಟರ್ನ್ಯಾಷನಲ್ ಮೆಡಿಸಿನ್ ಪಾಥ್ವೇ ಪ್ರೋಗ್ರಾಂನ ಪದವೀಧರರಿಗೆ ರೆಸಿಡೆನ್ಸಿ (PG) ತರಬೇತಿಗೆ ಪ್ರವೇಶದಲ್ಲಿ ಆದ್ಯತೆ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು pathway@gmu.ac.ae ಗೆ ಇ-ಮೇಲ್ ಮೂಲಕ ಸಂಪರ್ಕಿಸಬಹುದು.

