ಸಾನಿಧ್ಯ ಸಂಸ್ಥೆಯಲ್ಲಿ ಸಂಭ್ರಮದ ಓಣಂ ಆಚರಣೆ ….. !

ಮಂಗಳೂರು: ಶ್ರೀ ಗಣೇಶ ಸೇವಾ ಟ್ರಸ್ಟ್ ಫಾರ್ ಎಕ್ಸೆಪ್ಷನಲ್ ಪರ್ಸನ್ಸ್ (ರಿ.) ವತಿಯಿಂದ ನಡೆಸಲ್ಪಡುವ ಸಾನಿಧ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆಶ್ರಯದಲ್ಲಿ ಶಕ್ತಿನಗರದ ಸಾನಿಧ್ಯ ರೆಸಿಡೆನ್ಶಿಯಲ್ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಕ್ತಿನಗರ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಮಹೇಶ್ ಮುಖ್ಯ ಅತಿಥಿಯಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾನಿಧ್ಯ ಸಂಸ್ಥೆಯಲ್ಲಿ ನಡೆದ ಓಣಂ ಆಚರಣೆಯು ಕೇರಳದಲ್ಲಿರುವ ಅನುಭವವನ್ನು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕಾಗಿ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಲವು ದಿನಗಳ ಕಾಲ ಶ್ರಮಿಸಿ ಸುಂದರವಾದ ಓಣಂ ಪೂಕ್ಕಳಂ ಸೇರಿದಂತೆ ವಿವಿಧ ಸಾಂಸ್ಕೃತಿಕ ಸಿದ್ಧತೆಗಳನ್ನು ಮಾಡಿರುವುದು ಗಮನಾರ್ಹವಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ಎಲ್ಲರಿಗೂ ಹೃದಯಪೂರ್ವಕ ಓಣಂ ಶುಭಾಶಯಗಳನ್ನು ಕೋರಿದರು.

ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ ಮಾತನಾಡಿ, ಓಣಂ ಆಚರಣೆಯ ಸೊಬಗನ್ನು ಕಂಡು ಕೇರಳದಲ್ಲಿರುವ ಅನುಭವವಾಗುತ್ತಿದೆ ಎಂಬ ಮಹೇಶ್ ಅವರ ಮಾತು ಅರ್ಥಪೂರ್ಣವಾಗಿದೆ. ಎಲ್ಲ ಧರ್ಮಗಳನ್ನು ಪ್ರೀತಿಸಿ, ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಇಂತಹ ಸೌಹಾರ್ದದ ಭಾವನೆಗಳು ಮೂಡಲು ಸಾಧ್ಯ ಎಂದು ಹೇಳಿದರು.

ಸಾನಿಧ್ಯ ಸಂಸ್ಥೆಯ ಯಾವುದೇ ಕಾರ್ಯಕ್ರಮವಾದರೂ ಅದನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತದೆ. ಓಣಂ ಪೂಕ್ಕಳಂ ಸಿದ್ಧಪಡಿಸಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎರಡು-ಮೂರು ದಿನಗಳ ಕಾಲ ಪರಿಶ್ರಮಿಸಿದ್ದಾರೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸಾನಿಧ್ಯ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಸಂಸ್ಥೆಯ ಪ್ರಮುಖರಾದ ಜಗದೀಶ್ ಶೆಟ್ಟಿ, ಪ್ರೊ. ರಾಧಾಕೃಷ್ಣ, ಸ್ಟೀವನ್ ಪಿಂಟೊ, ಮಹಮ್ಮದ್ ಬಷೀರ್, ಉಷಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸ್ಥೆಯ ಟ್ರಸ್ಟಿಗಳು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ಹಾಗೂ ವಿಶೇಷ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕೇರಳದ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಕಥಕಳಿ ಹಾಗೂ ಮೋಹಿನಿಯಾಟ್ಟಂ ನೋಡುಗರ ಕಣ್ಮನ ಸೆಳೆದವು. ವಿಶೇಷವಾಗಿ ಸುಂದರವಾಗಿ ಅಲಂಕರಿಸಲಾದ ಓಣಂ ಪೂಕ್ಕಳಂ ದೇವರ ನಾಡು ಕೇರಳದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವಂತಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!