ಕಾಸರಗೋಡು: ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ಕನ್ನಡ ಪ್ರಕಾಶನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ‘ಕರ್ನಾಟಕ–ಗಡಿನಾಡ ಕನ್ನಡ ಸಮ್ಮೇಳನ-2026’ ಜುಲೈ 26ರಂದು (ಭಾನುವಾರ) ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ನೇತೃತ್ವದ ಕನ್ನಡ ಭವನದಲ್ಲಿರುವ ದಿ. ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ನಡೆಯಲಿದೆ.

ಬೆಂಗಳೂರುದ ಡಾ. ಸಿ. ಸೋಮಶೇಖರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.), ಕಾಸರಗೋಡು ವತಿಯಿಂದ ‘ಸಾಂಸ್ಕೃತಿಕ ಕಲಾ ವೈಭವ – ಕಲಾವಿದರ ಕಲರವ’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.


ಸಮ್ಮೇಳನದ ಅಂಗವಾಗಿ ಕರ್ನಾಟಕದ ವಿವಿಧ ಭಾಗಗಳ ನುರಿತ ಕಲಾ ತಂಡಗಳು ನೃತ್ಯ, ಸಂಗೀತ ಹಾಗೂ ಜಾನಪದ ಕಲಾ ಪ್ರದರ್ಶನಗಳನ್ನು ನೀಡಲಿವೆ. ಸಮೂಹ ಶಾಸ್ತ್ರೀಯ ನೃತ್ಯವನ್ನು ಕು. ಪೃಥ್ವಿ ಕೆ.ಎನ್. ಮತ್ತು ತಂಡ (ಬೆಂಗಳೂರು), ಸಮೂಹ ಜಾನಪದ ನೃತ್ಯವನ್ನು ಕು. ವಿಜಯ್ ಮತ್ತು ತಂಡ (ಬೆಂಗಳೂರು ಗ್ರಾಮಾಂತರ), ಸಮೂಹ ನೃತ್ಯ ರೂಪಕವನ್ನು ಶ್ರೀಮತಿ ಸವಿತಾ ಮತ್ತು ತಂಡ (ಬೆಂಗಳೂರು), ಯಕ್ಷಗಾನವನ್ನು ಕು. ವನಿಷಾ ಮತ್ತು ತಂಡ, ಕಥಕ್ಕಳಿಯನ್ನು ಮಹೇಶ್ ಕುಮಾರ್ ಮತ್ತು ತಂಡ, ಡೊಳ್ಳು ಕುಣಿತವನ್ನು ಸತೀಶ್ ಮತ್ತು ತಂಡ (ಬೆಂಗಳೂರು ದಕ್ಷಿಣ), ತಮಟೆ ಪ್ರದರ್ಶನವನ್ನು ಮಲ್ಲೇಶ್ ಮತ್ತು ತಂಡ (ಬೆಂಗಳೂರು ದಕ್ಷಿಣ), ಪೂಜಾ ಕುಣಿತವನ್ನು ರಾಜು ಮತ್ತು ತಂಡ (ಬೆಂಗಳೂರು ದಕ್ಷಿಣ) ಹಾಗೂ ಪಟ ಕುಣಿತವನ್ನು ವರದರಾಜು ಮತ್ತು ತಂಡ (ಕನಕಪುರ) ಪ್ರಸ್ತುತಪಡಿಸಲಿದ್ದಾರೆ.

ಕನ್ನಡ ಜಾನಪದ ಕಲಾ ಪ್ರವರ್ತಕ ಶ್ರೀ ನಾಗರಾಜ್ ಅವರ ಸಾರಥ್ಯದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿದ್ದು, ದಿನವಿಡೀ ವಿವಿಧ ಸಮಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ಕೆ ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


