ಮಂಜೇಶ್ವರ : ಆಹಾರ ಸೇವಿಸುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಕುಂಬಳೆ ಕುಂಟಂಗೇರಡ್ಕದ ಅಬ್ದುಲ್ಲ ಎಂಬವರ ಪುತ್ರ ಮುಬಾರಿಸ್ (18) ಸಾವನ್ನಪ್ಪಿದ ದುರ್ದೈವಿ.
ಈತ ಮಂಗಳೂರಿನ ಶ್ರೀ ದೇವಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದನು. ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡುವ ವೇಳೆ ಮುಬಾರಿಸ್ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದರು.

ತಕ್ಷಣವೇ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಯುವ ವಿದ್ಯಾರ್ಥಿಯ ಅಕಾಲಿಕ ನಿಧನದಿಂದ ಕುಟುಂಬದಲ್ಲಿ ಹಾಗೂ ಸ್ಥಳೀಯವಾಗಿ ತೀವ್ರ ಶೋಕ ಮಡುಗಟ್ಟಿದೆ.

