ಮಂಜೇಶ್ವರ: ಕುಂಬಳೆ ಪಂಚಾಯತ್ನ ಓಣಂ ಆಚರಣೆಯು ವಿವಾದಕ್ಕೆ ಕಾರಣವಾಗಿದೆ. ಅಧಿಕೃತ ಸಭಾಂಗಣವಿದ್ದರೂ, ಪಂಚಾಯತ್ ಸದಸ್ಯನಲ್ಲದ ಹಾಗೂ ವಿವಾದಿತ ವ್ಯಕ್ತಿಯೊಬ್ಬರ ಮನೆಯಲ್ಲಿ ಕಾರ್ಯಕ್ರಮ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಆಚರಣೆಯ ದಿನಾಂಕ ನಿಗದಿಯಾಗಿದ್ದರೂ ಸ್ಥಳವನ್ನು ಕೊನೆಯ ಕ್ಷಣದವರೆಗೆ ಗೌಪ್ಯವಾಗಿರಿಸಲಾಗಿತ್ತು. ರೆಸಾರ್ಟ್ ಅಥವಾ ಅತಿಥಿಗೃಹ ಎಂದು ನಂಬಿಸಿ ಕೊನೆಗೆ ಖಾಸಗಿ ವ್ಯಕ್ತಿಯ ಮನೆಯಲ್ಲಿ ಆಯೋಜಿಸಿರುವುದು ಸ್ಥಳೀಯರ ಹಾಗೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ಸ್ಥಳಕ್ಕೆ ತೆರಳಿದ ಕೆಲ ಬಿಜೆಪಿ ನೇತಾರರು ಪ್ರತಿಭಟಿಸಿ ವಾಪಸಾದರೆ, ಇನ್ನು ಮೂವರು ಸದಸ್ಯರು ಭೋಜನಕೂಟ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಪಕ್ಷದೊಳಗೆ ಬಿಕ್ಕಟ್ಟು ಸೃಷ್ಟಿಸಿದೆ.

ಪಂಚಾಯತ್ಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಅಧಿಕೃತ ಕಚೇರಿಯಲ್ಲಿ ನಡೆಸದೆ, ವಿವಾದಿತ ಶಾಪಿಂಗ್ ಕಾಂಪ್ಲೆಕ್ಸ್ ಹಿನ್ನೆಲೆಯಿರುವ ವ್ಯಕ್ತಿಯ ಮನೆಯಲ್ಲಿ ನಡೆಸಿರುವುದು ಜನಪ್ರತಿನಿಧಿಗಳ ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕುರಿತು ಆಡಳಿತ ಪಕ್ಷದಲ್ಲೂ ಅಸಮಾಧಾನ ವ್ಯಕ್ತವಾಗಿದ್ದು, ತಪ್ಪಿತಸ್ಥ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

