ಮಂಗಳೂರು, ಆ.26: ಇವರ ಸೀಟಿ, ಕೈ ಸನ್ನೆಗೆ ಆಟೋರಿಕ್ಷಾಗಳು ಅತ್ತಿಂದಿತ್ತ ನಿಲ್ದಾಣ ಬದಲಿಸುತ್ತವೆ. ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟುತ್ತಾರೆ. ಇತರ ವಾಹನಗಳು ನಿಲುಗಡೆಗೊಂಡು, ಮತ್ತೆ ಸಂಚಾರ ಮುಂದುವರಿಸುತ್ತವೆ. ಹೀಗೆ ಹಂಪನಕಟ್ಟೆ–ವೆನ್ಲಾಕ್ ಪರಿಸರದಲ್ಲಿ ವಾಹನ ಹಾಗೂ ಪಾದಚಾರಿಗಳ ಸಂಚಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವವರು 65 ವರ್ಷದ ರೈಮಂಡ್ ಮೊಂತೆರೋ.

ಹಂಪನಕಟ್ಟೆ ಸಿಗ್ನಲ್ ಸಮೀಪ ವೆನ್ಲಾಕ್ ಜಿಲ್ಲಾಸ್ಪತ್ರೆಯ ಓಪಿಡಿ ಮುಂಭಾಗದಲ್ಲಿರುವ ಎರಡು ಆಟೋರಿಕ್ಷಾ ನಿಲ್ದಾಣಗಳ ನಿರ್ವಾಹಕರಾಗಿ ರೈಮಂಡ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಮಿಲಾಗ್ರಿಸ್ ಚರ್ಚ್ ಮುಂಭಾಗದ ಆಟೋ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆಯಿಂದ ಕೇವಲ ನಾಲ್ಕು ಆಟೋರಿಕ್ಷಾಗಳನ್ನು ಮಾತ್ರ ನಿಲುಗಡೆ ಮಾಡಲು ಸಾಧ್ಯ. ಅಲ್ಲಿನ ಆಟೋಗಳು ಖಾಲಿಯಾದಾಗ ಪಕ್ಕದಲ್ಲಿರುವ ವೆನ್ಲಾಕ್ ಓಪಿಡಿ ಆಟೋ ನಿಲ್ದಾಣದಿಂದ ಆಟೋಗಳನ್ನು ಕಳುಹಿಸಬೇಕಾಗುತ್ತದೆ.

ಆದರೆ ಮಿಲಾಗ್ರಿಸ್ ಚರ್ಚ್ ಎದುರಿನ ನಿಲ್ದಾಣದಿಂದ ಓಪಿಡಿ ನಿಲ್ದಾಣ ಸ್ವಲ್ಪ ದೂರದಲ್ಲಿದ್ದು, ಎರಡೂ ನಿಲ್ದಾಣಗಳು ಪರಸ್ಪರ ಕಾಣಿಸುವುದಿಲ್ಲ. ಹೀಗಾಗಿ ಎರಡು ನಿಲ್ದಾಣಗಳ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿ ರೈಮಂಡ್ ಅವರ ಮೇಲಿದೆ. ವಾಹನ ಹಾಗೂ ಜನರ ಓಡಾಟ ಹೆಚ್ಚಿರುವ ಈ ಪ್ರದೇಶದಲ್ಲಿ ಅವರ ಸೇವೆ ಅನಿವಾರ್ಯವಾಗಿದ್ದು, ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಆಟೋ ಚಾಲಕರ ಯೂನಿಫಾರಂ ಹಾಗೂ ತಲೆಯಲ್ಲಿ ಕ್ಯಾಪ್ ಧರಿಸಿ ಕರ್ತವ್ಯ ನಿರ್ವಹಿಸುವ ರೈಮಂಡ್, ಸೀಟಿ ಊದುವುದು ಹಾಗೂ ಕೈ ಸನ್ನೆ ನೀಡುವ ಮೂಲಕ ಆಟೋರಿಕ್ಷಾಗಳ ಸಂಚಾರವನ್ನು ನಿಯಂತ್ರಿಸುತ್ತಾರೆ. ಇದರಿಂದ ಆಟೋ ನಿಲ್ದಾಣಗಳ ನಿರ್ವಹಣೆ ಸುಗಮವಾಗುವುದರ ಜತೆಗೆ ಚಾಲಕರು ಮತ್ತು ಪ್ರಯಾಣಿಕರಿಗೂ ಅನುಕೂಲವಾಗಿದೆ.

ಬೆಳಗ್ಗೆ 8ರಿಂದ ಸಂಜೆ 6ರವರೆಗೆ ರಸ್ತೆಯಲ್ಲೇ ನಿಂತು ಆಟೋ ನಿಲ್ದಾಣಗಳನ್ನು ನಿರ್ವಹಿಸುವ ರೈಮಂಡ್, ಇದರ ಜತೆಗೆ ಹಂಪನಕಟ್ಟೆ ಹಾಗೂ ವೆನ್ಲಾಕ್ ಪರಿಸರದಲ್ಲಿ ವಾಹನಗಳ ಸಂಚಾರವನ್ನೂ ನಿಯಂತ್ರಿಸುತ್ತಾರೆ. ಮಕ್ಕಳು ಹಾಗೂ ಹಿರಿಯ ನಾಗರಿಕರು ರಸ್ತೆ ದಾಟಲು ಅಕ್ಕರೆಯಿಂದ ನೆರವಾಗುತ್ತಾರೆ. ಅವರ ಸೇವೆಯನ್ನು ಪೊಲೀಸರು ಕೂಡ ಮೆಚ್ಚಿಕೊಂಡಿದ್ದು, ಹಲವು ಬಾರಿ ಸಮ್ಮಾನಿಸಲಾಗಿದೆ.
ಹಿಂದೆ ಮಿಲಾಗ್ರಿಸ್ ಚರ್ಚ್ ಬಳಿ ಹೆಚ್ಚಿನ ಸಂಖ್ಯೆಯ ಆಟೋರಿಕ್ಷಾಗಳನ್ನು ನಿಲುಗಡೆ ಮಾಡಲು ಅವಕಾಶವಿತ್ತು. ಆದರೆ ಕೆಲವು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಕಾಮಗಾರಿ ಹಾಗೂ ಗೇಟ್ ತೆರವು ಸೇರಿದಂತೆ ವಿವಿಧ ಕಾರಣಗಳಿಂದ ನಿಲ್ದಾಣದ ಸ್ಥಳಾವಕಾಶ ಕಡಿಮೆಯಾಯಿತು. ಪರಿಣಾಮವಾಗಿ ಆಟೋಗಳು ರೈಲು ನಿಲ್ದಾಣ ರಸ್ತೆಯ ಬಳಿಯೂ ನಿಲುಗಡೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಚರ್ಚ್ ಎದುರು ಕೇವಲ ನಾಲ್ಕು ಆಟೋಗಳಿಗೆ ಮಾತ್ರ ಸ್ಥಳಾವಕಾಶ ಉಳಿದಾಗ, ಎರಡು ನಿಲ್ದಾಣಗಳ ನಡುವೆ ಸಮನ್ವಯ ಸಾಧಿಸುವ ಅಗತ್ಯ ಎದುರಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರೇ ರೈಮಂಡ್ ಅವರನ್ನು ನಿಲ್ದಾಣ ನಿರ್ವಾಹಕರಾಗಿ ನಿಯೋಜಿಸಿದರು.
ಎರಡು ಆಟೋ ನಿಲ್ದಾಣಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ರೈಮಂಡ್, ಸ್ಥಳಾವಕಾಶದ ಕೊರತೆಯ ನಡುವೆಯೂ ಆಟೋಗಳ ನಿಲುಗಡೆ ಹಾಗೂ ಸಂಚಾರವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ ಮತ್ತು ಜಂಕ್ಷನ್ ಪ್ರದೇಶವಾಗಿರುವುದರಿಂದ ಇಲ್ಲಿ ವಾಹನ ಹಾಗೂ ಜನರ ಓಡಾಟ ಹೆಚ್ಚಿದ್ದು, ಅವರ ಸೇವೆಯಿಂದ ಆಟೋ ಚಾಲಕರು ಮಾತ್ರವಲ್ಲದೆ ಸಾರ್ವಜನಿಕರು ಹಾಗೂ ಪೊಲೀಸರಿಗೂ ಅನುಕೂಲವಾಗಿದೆ ಎಂದು ಆಟೋ ಚಾಲಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

“ಕಳೆದ 25 ವರ್ಷಗಳಿಂದ ಆಟೋರಿಕ್ಷಾಗಳನ್ನು ಕಳುಹಿಸುವುದು ಹಾಗೂ ಸಂಚಾರ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಪೊಲೀಸರು ಹೋಂ ಗಾರ್ಡ್ ಆಗಿ ಸೇರಲು ಕರೆದಿದ್ದರು. ಆದರೆ ಕಾರಣಾಂತರಗಳಿಂದ ಸೇರಲು ಸಾಧ್ಯವಾಗಲಿಲ್ಲ. ಆಟೋಗಳನ್ನು ಕಳುಹಿಸುವುದರ ಜತೆಗೆ ಸಂಚಾರ ನಿರ್ವಹಣೆ ಹಾಗೂ ಜನರನ್ನು ರಸ್ತೆ ದಾಟಿಸುವ ಕೆಲಸ ಮಾಡುತ್ತೇನೆ. ಇದರಿಂದ ನನಗೆ ತೃಪ್ತಿ ಇದೆ. ಆಟೋ ಚಾಲಕರೇ ನನಗೆ ಹಣ ನೀಡುತ್ತಾರೆ” ಎಂದು ರೈಮಂಡ್ ಮೊಂತೆರೋ ಹೇಳುತ್ತಾರೆ.

