ಸಾನಿಧ್ಯದಲ್ಲಿ ಶಿಕ್ಷಕರ ದಿನಾಚರಣೆ.ಶಿಕ್ಷಕರ ಸೇವೆ ಸಮಾಜ ನಿರ್ಮಾಣದಲ್ಲಿ ಮಹತ್ವದ್ದು: ಸಂತೋಷ್ ಕುಮಾರ್ ಶೆಟ್ಟಿ

ಮಂಗಳೂರು: ಶಕ್ತಿನಗರದಲ್ಲಿರುವ ವಿಶೇಷಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರ ‘ಸಾನಿಧ್ಯ’ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಭಾಗವಹಿಸಿ ಶಿಕ್ಷಕರಿಗೆ ಶುಭಾಶಯ ಸಲ್ಲಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾನಿಧ್ಯದಲ್ಲಿ ವಿಶೇಷ ಮಕ್ಕಳೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಿರುವುದು ತಮಗೆ ವಿಶೇಷ ಸಂತಸ ತಂದಿದೆ. ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರ ಪ್ರೀತಿ, ಸೇವಾ ಮನೋಭಾವ ಮತ್ತು ಸಮರ್ಪಣೆ ಮನಸ್ಸಿಗೆ ಹತ್ತಿರವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ತಮ್ಮ ಭಾಗ್ಯ ಎಂದು ಹೇಳಿದರು.

ಇತ್ತೀಚೆಗಷ್ಟೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ತಮ್ಮನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ಆದರೆ, ತಾವು ಸನ್ಮಾನಕ್ಕೆ ಅರ್ಹರಾಗುವಂತಹ ಯಾವುದೇ ಕಾರ್ಯವನ್ನು ಇನ್ನೂ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪ್ರಾಧಿಕಾರದ ಮೂಲಕ ಉತ್ತಮ ಕಾರ್ಯಗಳನ್ನು ಕೈಗೊಂಡು ಸಾಧನೆ ಮಾಡಿದ ಸಂದರ್ಭದಲ್ಲಿ ಸನ್ಮಾನಕ್ಕೆ ಅರ್ಹರಾಗುತ್ತೇನೆ ಎಂದು ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.

ಸಾನಿಧ್ಯದಲ್ಲಿ ವಿಶೇಷ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳನ್ನು ಆರೈಕೆ ಮಾಡುತ್ತಿರುವ ಮೇಲ್ವಿಚಾರಕರ ಕಾರ್ಯವನ್ನು ಶ್ಲಾಘಿಸಿದ ಅವರು, ಅವರ ಸೇವೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ಸಾನಿಧ್ಯದಂತಹ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿ (CSR) ಮೂಲಕ ನೆರವು ಒದಗಿಸುವ ಅವಕಾಶವಿದೆ. ಸಂಸ್ಥೆಗೆ ಅಗತ್ಯವಿರುವ ಬೇಡಿಕೆಗಳ ಕುರಿತು ಮಾಹಿತಿ ನೀಡಿದಲ್ಲಿ, ತಮ್ಮಿಂದ ಸಾಧ್ಯವಾದ ನೆರವನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಸಾನಿಧ್ಯ ಸಂಸ್ಥೆಗೆ ತಮ್ಮಿಂದಾಗುವ ಕೊಡುಗೆಯನ್ನು ಪ್ರಥಮ ಆದ್ಯತೆಯಲ್ಲಿ ನೀಡಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ಸಾನಿಧ್ಯ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾನಿಧ್ಯ ಸಂಸ್ಥೆಯ ವಸಂತ್ ಕುಮಾರ್ ಶೆಟ್ಟಿ, ಮಹಾಬಲ ಮಾರ್ಲ, ಜಗದೀಶ್ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

SHARE
Loading spinner

One thought on “ಸಾನಿಧ್ಯದಲ್ಲಿ ಶಿಕ್ಷಕರ ದಿನಾಚರಣೆ.ಶಿಕ್ಷಕರ ಸೇವೆ ಸಮಾಜ ನಿರ್ಮಾಣದಲ್ಲಿ ಮಹತ್ವದ್ದು: ಸಂತೋಷ್ ಕುಮಾರ್ ಶೆಟ್ಟಿ

Leave a Reply

Your email address will not be published. Required fields are marked *

error: Content is protected !!