ಮಂಗಳೂರು: ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರಬೇಕು ಹಾಗೂ ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಚಾಲಕ ಶರಣ್ ಪಂಪವೆಲ್ ತಿಳಿಸಿದ್ದಾರೆ.

ದೇಶಾದ್ಯಂತ ನಡೆಯುತ್ತಿರುವ ‘ಗೋಮಾತೆಯ ಗೌರವ’ ಅಭಿಯಾನದ ಮೂರನೇ ಹಂತದ ಭಾಗವಾಗಿ ಜಿಲ್ಲೆಯ ವಿವಿಧ ಹಿಂದೂಪರ ಸಂಘಟನೆಗಳು, ಮಠ–ಮಂದಿರಗಳು ಹಾಗೂ ಗೋಶಾಲೆಗಳ ಸಹಯೋಗದಲ್ಲಿ ಅಭಿಯಾನ ನಡೆಯಲಿದೆ. ಮುಂದಿನ ಎರಡು ತಿಂಗಳ ಕಾಲ ಮನೆಮನೆಗೆ ತೆರಳಿ ಸಹಿ ಸಂಗ್ರಹಿಸಲಾಗುವುದು. ಜಿಲ್ಲೆಯಲ್ಲಿ 108 ಮಂದಿಯ ಜಿಲ್ಲಾ ಸಮಿತಿ, ಒಂಬತ್ತು ತಾಲೂಕುಗಳಲ್ಲಿ ತಲಾ 21 ಮಂದಿಯ ಸಮಿತಿ ಹಾಗೂ ಗ್ರಾಮಮಟ್ಟದಲ್ಲಿ ಆರು ಮಂದಿಯ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ದೇಶವ್ಯಾಪಿ ನಡೆದ ಮೊದಲ ಹಂತದಲ್ಲಿ ಸುಮಾರು 5 ಕೋಟಿ ಹಾಗೂ ಎರಡನೇ ಹಂತದಲ್ಲಿ 16 ಕೋಟಿ ಸಹಿಗಳನ್ನು ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ. ಇದೀಗ ಮೂರನೇ ಹಂತದಲ್ಲಿ ದೇಶಾದ್ಯಂತ ಹೆಚ್ಚುವರಿಯಾಗಿ 30 ಕೋಟಿ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಬಳಿಕ ರಾಜ್ಯ ರಾಜಧಾನಿಗಳಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯಪಾಲರ ಮೂಲಕ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಶರಣ್ ಪಂಪವೆಲ್ ತಿಳಿಸಿದರು.

ಡಿಸೆಂಬರ್ 17ರಂದು ಮೂರು ಲಕ್ಷಕ್ಕೂ ಅಧಿಕ ಗೋಪ್ರೇಮಿಗಳ ಬೃಹತ್ ಸಮಾವೇಶ ನಡೆಸಿ ಸಂಗ್ರಹಿಸಿದ ಸಹಿಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 10 ಸಾವಿರಕ್ಕೂ ಅಧಿಕ ಗೋಸೇವಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಫೆಬ್ರುವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಸಮಾವೇಶ ನಡೆಸಿ ರಾಷ್ಟ್ರಪತಿಗಳಿಗೆ ನೇರವಾಗಿ ಮನವಿ ಸಲ್ಲಿಸಲಾಗುವುದು. ಅಗತ್ಯವಿದ್ದರೆ ಸಾಧು–ಸಂತರು ರಾಷ್ಟ್ರಮಟ್ಟದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಲಿದ್ದಾರೆ ಎಂದು ಅವರು ಹೇಳಿದರು.

ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸುವುದು, ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸುವುದು ಹಾಗೂ ಗೋವಿನ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವ ಸಂಪುಟ ಖಾತೆ ರಚಿಸುವುದು ಅಭಿಯಾನದ ಪ್ರಮುಖ ಬೇಡಿಕೆಗಳಾಗಿವೆ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ ಎಂದು ಅವರು ಹೇಳಿದರು.
ಕೊಂಡಾಣದ ಶ್ರೀ ಶಿವ ದುರ್ಗಾಂಭ ಮಠದ ಶಿವಗಿರಿಯ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಮಾತನಾಡಿ, ತಾಯಿಯನ್ನು ಹೇಗೆ ಆರಾಧಿಸುತ್ತೇವೆಯೋ ಅದೇ ರೀತಿಯಲ್ಲಿ ಗೋಮಾತೆಯನ್ನೂ ಗೌರವಿಸಿ ರಕ್ಷಿಸಬೇಕು. ಗೋಮಾತೆಯ ರಕ್ಷಣೆಗೆ ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. ಗ್ರಾಮ, ದೇವಸ್ಥಾನ ಹಾಗೂ ಮಠ–ಮಂದಿರ ಮಟ್ಟದಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಅಭಿಯಾನಕ್ಕೆ ಕೈಜೋಡಿಸುವಂತೆ ಜನರಲ್ಲಿ ಮನವಿ ಮಾಡಬೇಕು ಎಂದರು.

ಗೋವಿನ ರಕ್ಷಣೆಗೆ ಸಮಗ್ರ ಕಾನೂನು ಜಾರಿಯಾದರೆ ಬೀದಿಗಳಲ್ಲಿ ಅಲೆದಾಡುವ ಗೋವುಗಳ ರಕ್ಷಣೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ರೂಪಿಸಲು ಸಾಧ್ಯವಾಗಲಿದೆ. ಇದು ಮೂರನೇ ಹಂತದ ನಿರಂತರ ಪ್ರಯತ್ನವಾಗಿದ್ದು, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಸತ್ಯಾಗ್ರಹ ನಡೆಸಲು ಸಿದ್ಧರಿದ್ದೇವೆ. ಅಗತ್ಯವಿದ್ದರೆ ಮಂಗಳೂರಿನಲ್ಲಿಯೂ ನಿರಂತರ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದರು.
ಗೋಮಾತೆಯ ರಕ್ಷಣೆ ಹಿಂದೂ ಸಮಾಜದ ಪ್ರಮುಖ ಕರ್ತವ್ಯವಾಗಿದ್ದು, ಎಲ್ಲ ಮಠ–ಮಂದಿರಗಳು ಹಾಗೂ ಸಾಧು–ಸಂತರು ಅಭಿಯಾನಕ್ಕೆ ಕೈಜೋಡಿಸಬೇಕು. ಗೋಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸುವ ಬೇಡಿಕೆ ಈಡೇರುವವರೆಗೆ ಸಂಘಟಿತವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯ ಬಳಿಕ ಕೊಂಡಾಣದ ಶ್ರೀ ಶಿವ ದುರ್ಗಾಂಭ ಮಠದ ಶಿವಗಿರಿಯ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಎಚ್.ಕೆ. ಪುರುಷೋತ್ತಮ್, ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ಅಶೋಕ್ ಇಳಂತಿಲ, ಉದಯ್ ಶಂಕರ್ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

