ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕಾರ್ಯಕಾರಿಣಿ ಸಭೆಯು ಮಂಗಳೂರಿನ ಜಿಲ್ಲಾ ಪಕ್ಷದ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಇದೇ ಸಂದರ್ಭದಲ್ಲಿ ‘ಗೋಸಮ್ಮಾನ್ ಅಭಿಯಾನ’ದ ದಕ್ಷಿಣ ಕನ್ನಡ ಜಿಲ್ಲಾ ಸಹ-ಪ್ರಭಾರಿ ಅಶೋಕ್ ಇಳಂತಿಲ ಅವರು ಮಾತನಾಡಿ, ಗೋವಿಗೆ ರಾಷ್ಟ್ರೀಯ ಸ್ಥಾನಮಾನ ದೊರೆಯಬೇಕು, ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಲ್ಲಬೇಕು, ದೇಸೀ ತಳಿಗಳ ಸಂರಕ್ಷಣೆಗಾಗಿ ಪ್ರತ್ಯೇಕ ‘ಗೋಸೇವಾ ಸಚಿವಾಲಯ’ ಸ್ಥಾಪನೆಯಾಗಬೇಕು ಹಾಗೂ ಕಟ್ಟುನಿಟ್ಟಿನ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬರಬೇಕೆಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ‘ಗೋಸಮ್ಮಾನ್ ಅಭಿಯಾನ’ದ ಸಹಿ ಸಂಗ್ರಹಕ್ಕೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ನಂತರ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರು ಮನವಿ ಪತ್ರಕ್ಕೆ ಸಹಿ ಹಾಕುವ ಮೂಲಕ ಜಿಲ್ಲೆಯಲ್ಲಿ ‘ಗೋಸಮ್ಮಾನ್’ ಸಹಿ ಸಂಗ್ರಹ ಅಭಿಯಾನಕ್ಕೆ ಪಕ್ಷದ ವತಿಯಿಂದ ಚಾಲನೆ ನೀಡಿದರು.
ಸಭೆಯಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಮಂಡಲಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

