ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮುಖವಾಡ ತಯಾರಿ ಮತ್ತು ಮುಖವರ್ಣಿಕಾ ಕಾರ್ಯಾಗಾರ

ಇಂಟಾಕ್ ಮಂಗಳೂರು ಅಧ್ಯಾಯ, ಎಚ್.ಇ.ಸಿ.ಎಸ್, ಇಂಟಾಕ್ ಮತ್ತು ಮಂಚಿ ಕೊಳ್ನಾಡು ಪ್ರೌಢಶಾಲೆಯ ಇಂಟಾಕ್ ಹೆರಿಟೇಜ್ ಕ್ಲಬ್, ಸಹಯೋಗದೊಂದಿಗೆ ಮಂಚಿ – ಕೊಳ್ನಾಡು ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಮುಖವಾಡ ತಯಾರಿ ಮತ್ತು ಮುಖವರ್ಣಿಕೆಯ ಬಗ್ಗೆ ಕಾರ್ಯಕ್ರಮವನ್ನು ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 12.09.2026 ನೇ ಶನಿವಾರ ಆಯೋಜಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕರು ಸುಭಾಷ್ ಚಂದ್ರ ಬಸು ಮಾತನಾಡಿ, ನಮ್ಮ ನಾಡಿನ ಸಾಂಪ್ರದಾಯಿಕ ಕಲೆ ಪರಂಪರೆಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಈ ಬಗ್ಗೆ ಆಸಕ್ತಿ ತಳೆದರೆ ಇತಿಹಾಸ ಉಳಿಸುವ ಪ್ರಯತ್ನವಾಗುತ್ತದೆ ಎಂದರು.

ಇಂಟಾಕ್ ಮಂಗಳೂರು ಅಧ್ಯಾಯದ ಸದಸ್ಯರು ಹಾಗೂ ಖ್ಯಾತ ಚಿತ್ರ ಕಲಾವಿದರಾದ ರಾಜೇಂದ್ರ ಕೇದಿಗೆ ಮಾತನಾಡಿ, ಮುಖವಾಡ ತಯಾರಿ ಮತ್ತು ಮುಖವರ್ಣಿಕೆಯ ಕಲೆ ವಿದ್ಯಾರ್ಥಿಗಳಲ್ಲಿ ಕಲಾ ಕೌಶಲ್ಯ ಬೆಳೆಸುವುದಲ್ಲದೆ ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸುತ್ತದೆ. ಕಲೆಯ ಸೊಗಡನ್ನು ಮೈಗೂಡಿಸಿಕೊಂಡು ಬೆಳೆಯುವಂತಾದರೆ ಕಲಾಪ್ರಜ್ಞೆ ನಮ್ಮದಾಗುತ್ತದೆ ಎಂದರು.

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ಕಲಾವಿದ ಹರೀಶ್ ಕೊಡಿಯಾಲ್ ಬೈಲ್ ವಿದ್ಯಾರ್ಥಿಗಳಿಗೆ ಮುಖವಾಡ ತಯಾರಿಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಟ್ಟೆಯ ಮೂಲಕ ಮುಖದ ಅಚ್ಚನ್ನು ತೆಗೆಯುವ ವಿಧಾನದ ಕುರಿತಾಗಿ ತರಬೇತಿ ನೀಡಿದರು. ಕಾರ್ಯಗಾರದಲ್ಲಿ ಭಾಗವಹಿಸಿದ ವಿವಿಧ ಶಾಲೆಗಳ ಸುಮಾರು 60 ವಿದ್ಯಾರ್ಥಿಗಳು ಗುಂಪು ಚಟುವಟಿಕೆಯ ಮೂಲಕ ಮುಖವಾಡ ತಯಾರಿಸಿದರು.

ಕಾರ್ಯಗಾರದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಖ್ಯಾತ ಕಲಾವಿದೆ ರೇಷ್ಮಾ ಶೆಟ್ಟಿ ಮುಖವರ್ಣಿಕೆಯ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಹಾಗೂ ಬಳಸುವ ಕುರಿತಾಗಿ ಮಾಹಿತಿ ನೀಡುತ್ತಾ ವಿವಿಧ ರೀತಿಯ ಬಣ್ಣವನ್ನು ತಯಾರಿಸುವ ವಿಧಾನವನ್ನು ತಿಳಿಸಿದರು. ವಿದ್ಯಾರ್ಥಿಗಳು ತಾವು ರಚಿಸಿದ ಮುಖವಾಡಕ್ಕೆ ಯಕ್ಷಗಾನದ ವಿವಿಧ ವೇಷದ ಬಣ್ಣಗಾರಿಕೆಯನ್ನು ಮಾಡಿ ಸಂಭ್ರಮಿಸಿದರು.

ಮಂಚಿ ಕೊಳ್ನಾಡು ಪ್ರೌಢಶಾಲೆ, ನೂಜಿಬೈಲು ಅನುದಾನಿತ ಶಾಲೆ, ಮೋಂತಿಮಾರು ಶಾಲೆ, ಇರಾ ಪ್ರಾಥಮಿಕ ಶಾಲೆ, ಪುದ್ದೊಟ್ಟು ಶಾಲೆ ಇಲ್ಲಿನ ಒಟ್ಟು 60 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು. ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಇಂಟಾಕ್ ಮಂಗಳೂರು ಅಧ್ಯಾಯದ ಸದಸ್ಯರಾದ ಶರ್ವಾಣಿ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ, ಕೊಳ್ನಾಡು ಪ್ರೌಢಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು, ಮೋಂತಿಮಾರು ಶಾಲಾ ಶಿಕ್ಷಕಿ ಶ್ರೀಮತಿ ಯಶೋಧ, ಪುದ್ದೊಟ್ಟು ಶಾಲಾ ಶಿಕ್ಷಕಿ ರೇಖಾ ಹಾಗೂ ಕೊಳ್ನಾಡು ಪ್ರೌಢಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಶಿಕ್ಷಕ ಜಗನ್ನಾಥ ಪುರುಷ ಸ್ವಾಗತಿಸಿ, ತಾರಾನಾಥ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ವಿಟ್ಲ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!