ತುಳು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಒತ್ತಾಯ

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ತುಳು ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ತುಳು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಹಾಗೂ ತುಳುವನ್ನು ಕೇಂದ್ರ ಸರ್ಕಾರ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂದು ತುಳು ಪರಿಷತ್‌ ಮಂಗಳೂರು ಅಧ್ಯಕ್ಷ ಶುಭೋದಯ ಆಳ್ವ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ತುಳು ಭಾಷೆಗೆ ಎರಡು ಜಿಲ್ಲೆಗಳಿಗೆ ಸೀಮಿತವಾಗಿ ಆಡಳಿತ ಭಾಷೆಯ ಮಾನ್ಯತೆ ನೀಡಲಾಗಿದೆ. ಈ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಅಧಿಕೃತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಕೆಲವು ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳಲ್ಲಿ ನೀಡಲಾಗುತ್ತಿರುವ ತುಳು ಭಾಷಾ ಶಿಕ್ಷಣವನ್ನು ಎಲ್ಲ ಸರ್ಕಾರಿ, ಅನುದಾನಿತ, ಕನ್ನಡ ಮಾಧ್ಯಮ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗೆ ವಿಸ್ತರಿಸಬೇಕು. ಎರಡೂ ಜಿಲ್ಲೆಗಳ ವಿಶ್ವವಿದ್ಯಾಲಯಗಳಲ್ಲಿ ತುಳು ಭಾಷೆಯ ಅಧ್ಯಯನ ಮತ್ತು ಸಂಶೋಧನೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ವಿವಿಧ ಭಾಷಾ ಅಕಾಡೆಮಿಗಳ ಸಹಯೋಗದೊಂದಿಗೆ ತುಳು ಅಧ್ಯಯನಕ್ಕೆ ಉತ್ತೇಜನ ನೀಡಬೇಕು ಎಂದರು.

ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಸಂರಕ್ಷಣೆಗೆ ಒತ್ತು

ತುಳು ಪರಿಷತ್‌ ಪ್ರಧಾನ ಕಾರ್ಯದರ್ಶಿ ಬೆನೆಟ್‌ ಅಮ್ಮಣ್ಣ ಮಾತನಾಡಿ, ತುಳು ಭಾಷೆಗಾಗಿ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳು, ಸಾಹಿತಿಗಳು ಹಾಗೂ ಸಂಶೋಧಕರ ಸಮಗ್ರ ಮಾಹಿತಿ ಕೋಶ ರಚಿಸಬೇಕು ಎಂದು ಆಗ್ರಹಿಸಿದರು.

ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ತಾಳೆಗರಿ, ಹಸ್ತಪ್ರತಿ, ದೇಶಿ-ವಿದೇಶಿ ಗ್ರಂಥಗಳು, ಛಾಯಾಚಿತ್ರಗಳು ಹಾಗೂ ನಿಯತಕಾಲಿಕೆಗಳನ್ನು ಸಂರಕ್ಷಿಸುವ ಪತ್ರಾಗಾರ, ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು. ಸಂಶೋಧಕರಿಗೆ ಅಗತ್ಯ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದರು.

ತುಳುನಾಡಿನ ಚರಿತ್ರೆ, ಸಂಸ್ಕೃತಿ ಹಾಗೂ ಮೌಖಿಕ ಪರಂಪರೆಗಳನ್ನು ಆಡಿಯೋ, ವಿಡಿಯೋ ಮೂಲಕ ದಾಖಲಿಸುವವರಿಗೆ ಪ್ರೋತ್ಸಾಹ ನೀಡಬೇಕು. ಇತಿಹಾಸ ಸಾರುವ ಹಾಗೂ ಅಳಿವಿನಂಚಿನಲ್ಲಿರುವ ಕುರುಹುಗಳನ್ನು ಸಂರಕ್ಷಿಸಿ ದಾಖಲಿಸಬೇಕು. ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ದಾಖಲೀಕರಣಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ಚಾರಿತ್ರಿಕ ಊರುಗಳ ಹೆಸರುಗಳು ಹಾಗೂ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸಬೇಕು. ಬ್ಯಾಂಕ್‌, ಅಂಚೆ ಕಚೇರಿ, ಪೊಲೀಸ್‌, ರೈಲ್ವೆ ಇಲಾಖೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ತುಳು ಭಾಷಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ತುಳು ತಿಳಿಯದ ಸಿಬ್ಬಂದಿಗೆ ತುಳು ಭಾಷಾ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ತುಳು ನಾಟಕ, ಚಲನಚಿತ್ರ ಹಾಗೂ ಯಕ್ಷಗಾನದ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬೇಕು. ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ತುಳು ಗ್ರಂಥಗಳ ರಚನೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಬೆನೆಟ್‌ ಅಮ್ಮಣ್ಣ ಆಗ್ರಹಿಸಿದರು.

ತುಳು ಪರಿಷತ್‌ ಗೌರವಾಧ್ಯಕ್ಷ ಪ್ರಭಾಕರ ನೀರುಮಾರ್ಗ, ಉಪಾಧ್ಯಕ್ಷೆ ಚಂದ್ರಕಲಾ ಡಿ. ರಾವ್‌, ಕೋಶಾಧಿಕಾರಿ ಸುಮತಿ ಹೆಗ್ಡೆ, ಕಾರ್ಯದರ್ಶಿ ಶ್ರೀನಿವಾಸ ಹಾಗೂ ನ್ಯಾನ್ಸಿ ನೊರೊನ್ಹಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!