ಕಾಸರಗೋಡು : ಜಿಲ್ಲೆಯ ನದಿಗಳಲ್ಲಿ ಅಪರಿಮಿತವಾಗಿ ಮರಳು ತುಂಬಿ ಹರಿವಿಗೆ ತಡೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರುತ್ತಿದೆ. ಈ ಸಮಸ್ಯೆ ನಿವಾರಣೆಗೆ ಹಾಗೂ ಪ್ರಕೃತಿ ವಿಕೋಪ ನಿಯಂತ್ರಣಕ್ಕೆ ರಾಜ್ಯದ 17 ನದಿಗಳಿಂದ ಡಿಸೆಂಬರ್ ವೇಳೆಗೆ 1.7 ಕೋಟಿ ಟನ್ ಮರಳು ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.

ಕಂದಾಯ ಇಲಾಖೆಯ ‘ಸ್ಯಾಂಡ್ ಆಡಿಟ್’ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಪರಿಸರ ಮತ್ತು ಜಿಯೋಲಜಿ ವಿಭಾಗಗಳ ಅಂತಿಮ ಒಪ್ಪಿಗೆ ಬಾಕಿಯಿದೆ.

ಜಿಲ್ಲೆಯ ಉಪ್ಪಳ, ಮೊಗ್ರಾಲ್ ಮತ್ತು ಚಂದ್ರಗಿರಿ ಹೊಳೆಗಳಿಂದ ಮರಳು ತೆಗೆಯಲು ಅನುಮತಿ ಸಿಗಲಿದ್ದು, ಮಂಗಲ್ಪಾಡಿ, ಕುಂಬಳೆ ಹಾಗೂ ಚೆಮ್ನಾಡ್ ಪಂಚಾಯತ್ಗಳಿಗೆ ಈ ಜವಾಬ್ದಾರಿ ಹಸ್ತಾಂತರವಾಗಲಿದೆ.
ಇದರಿಂದ ಅಕ್ರಮ ಮರಳು ಸಾಗಾಣಿಕೆಗೆ ತಡೆ ಬೀಳುವುದರ ಜೊತೆಗೆ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಗಣನೀಯ ಆದಾಯ ಹರಿದುಬರುವ ನಿರೀಕ್ಷೆಯಿದೆ.

