ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಲಲಿತಕಲಾ ಸಂಘದ ವತಿಯಿಂದ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಮಾತನಾಡಿ, ಕಳೆದ 50–60 ವರ್ಷಗಳಿಂದ ಲಲಿತಕಲಾ ಸಂಘದ ವತಿಯಿಂದ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಹಲವು ಪ್ರತಿಭಾವಂತರು ಹಾಗೂ ಕಲಾವಿದರಿಗೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಕಾಲೇಜು ವೇದಿಕೆ ಕಲ್ಪಿಸಿದೆ ಎಂದು ಹೇಳಿದರು.

ಮೊಬೈಲ್ ಬಳಕೆಯಿಂದ ಯುವಜನರ ಬದುಕು ಏಕತಾನತೆಯಿಂದ ಕೂಡುತ್ತಿದೆ. ಇಂತಹ ಏಕತಾನತೆಯನ್ನು ಹೋಗಲಾಡಿಸಲು ಪ್ರತಿಭಾ ಅನ್ವೇಷಣೆಯಂತಹ ಕಾರ್ಯಕ್ರಮಗಳು ಉತ್ತಮ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್‌ನ ಸಹನಿರ್ದೇಶಕ ಪ್ರೊ. ರಾಮಕೃಷ್ಣ ಬಿ.ಎಂ., ಲಲಿತಕಲಾ ಸಂಘದ ಸಹನಿರ್ದೇಶಕಿ ಡಾ. ನಾಗರತ್ನ ಕೆ.ಎ., ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

