ಕಾಸರಗೋಡು: ಆದೂರು ಮಣಿಯೂರು ಚೆನ್ನಯ್ಯಮೂಲೆಯಲ್ಲಿ ತಂದೆಯೊಂದಿಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ಹಳೆಯ ಮನೆಯೊಂದರಲ್ಲಿ ಶಂಕಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಸ್ಥಳೀಯ ಅಂಗಡಿಯೊಂದರ ಉದ್ಯೋಗಿಯಾಗಿದ್ದ ಶೋಭಿತ್ (26) ಸಾವನ್ನಪ್ಪಿದ ದುರ್ದೈವಿ.

ಬೆಳಿಗ್ಗೆ ತಂದೆಯೊಡನೆ ಕೆಲಸಕ್ಕೆ ತೆರಳಿದ್ದ ಈತ, ಬಹಳ ಹೊತ್ತಾದರೂ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಈ ಹಿಂದೆ ಇವರು ವಾಸಿಸುತ್ತಿದ್ದ ಹಳೆಯ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ಮುಳ್ಳೇರಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಜೀವ ಉಳಿಸಲಾಗಲಿಲ್ಲ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.


