ಕಾಸರಗೋಡು: ಚಟ್ಟಂಚಾಲ್ ಪೇಟೆಯಲ್ಲಿ ಗ್ರಾಹಕನಂತೆ ನಟಿಸಿ ಬಂದ ಖದೀಮನೊಬ್ಬ ತರಕಾರಿ ಅಂಗಡಿಯಿಂದ 15,000 ರೂಪಾಯಿ ನಗದು ತುಂಬಿದ್ದ ಪರ್ಸ್ ಕದ್ದು ಪರಾರಿಯಾಗಿದ್ದಾನೆ.

ರಾಷ್ಟ್ರೀಯ ಹೆದ್ದಾರಿ ಬದಿಯ ‘ಕೆವಿಕೆ ವೆಜಿಟೇಬಲ್ಸ್’ ಅಂಗಡಿಯ ಸಿಬ್ಬಂದಿ ನಾಸರ್ ಎಂಬುವವರು ಅಲ್ಯುಮೀನಿಯಂ ಫ್ಯಾಬ್ರಿಕೇಶನ್ ಕೆಲಸಗಾರರಿಗೆ ನೀಡಲು ಕಪಾಟಿನಲ್ಲಿಟ್ಟಿದ್ದ ಹಣ ಇದಾಗಿತ್ತು.ಸಾಮಗ್ರಿ ಖರೀದಿಸುವ ನೆಪದಲ್ಲಿ ಬಂದ ವ್ಯಕ್ತಿ, ಸುದೀರ್ಘ ಸಮಯ ಅಂಗಡಿಯಲ್ಲಿದ್ದು ಬಳಿಕ ಕೈಚಳಕ ತೋರಿಸಿದ್ದಾನೆ.

ಈ ಸಂಪೂರ್ಣ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಘಟನೆಯ ನಂತರ ಆರೋಪಿ ಕಾಸರಗೋಡು ಕಡೆಗೆ ತೆರಳುವ ಬಸ್ ಹತ್ತಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

