ಮಂಗಳೂರು: ಬಿಎನ್‌ಐ ಮಂಗಳೂರು ಮತ್ತು ಉಡುಪಿ ವತಿಯಿಂದ ‘ಬಿಎನ್‌ಐ ಬಿಗ್ ಬ್ರಾಂಡ್ಸ್ ಎಕ್ಸ್‌ಪೋ 2026’ ಸೆ.25ರಿಂದ 27ರವರೆಗೆ ನಗರದ ಡಾ. ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಮೂರು ದಿನಗಳ ಎಕ್ಸ್‌ಪೋದಲ್ಲಿ 120ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಲಿದ್ದು, ವ್ಯಾಪಾರ, ಜೀವನಶೈಲಿ, ಆಹಾರ, ಕುಟುಂಬ, ಶಾಪಿಂಗ್ ಹಾಗೂ ಬಿಸಿನೆಸ್ ನೆಟ್‌ವರ್ಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಬ್ರಾಂಡ್‌ಗಳು ಒಂದೇ ವೇದಿಕೆಯಲ್ಲಿ ಪರಿಚಯಗೊಳ್ಳಲಿವೆ ಎಂದು ಬಿಎನ್‌ಐ ಮಂಗಳೂರು ಮತ್ತು ಉಡುಪಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಣೇಶ್ ಎನ್. ಶರ್ಮ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಗ್ ಬ್ರಾಂಡ್ಸ್ ಎಕ್ಸ್‌ಪೋ ಕೇವಲ ವಾಣಿಜ್ಯ ಪ್ರದರ್ಶನವಲ್ಲ. ವ್ಯಾಪಾರಿಗಳು, ಗ್ರಾಹಕರು, ಕುಟುಂಬಗಳು ಹಾಗೂ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಉದ್ದೇಶ ಹೊಂದಿದೆ. ಬಿಸಿನೆಸ್ ಝೋನ್, ಲೈಫ್‌ಸ್ಟೈಲ್ ಝೋನ್, ಫುಡ್ ಝೋನ್, ಫ್ಯಾಮಿಲಿ ಝೋನ್, ಆರ್ಟ್ ಆ್ಯಂಡ್ ಕಲ್ಚರ್ ಝೋನ್ ಹಾಗೂ ಆಟೋ ಝೋನ್ ಸೇರಿದಂತೆ ವಿವಿಧ ವಲಯಗಳನ್ನು ರೂಪಿಸಲಾಗಿದೆ ಎಂದರು.

ಎಕ್ಸ್‌ಪೋ ಅಧ್ಯಕ್ಷ ಮೋಹನ್‌ರಾಜ್ ಮಾತನಾಡಿ, ವ್ಯಾಪಾರಿಗಳಿಗೆ ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶಿಸಲು, ಹೊಸ ಗ್ರಾಹಕರನ್ನು ಸಂಪರ್ಕಿಸಲು ಮತ್ತು ಬಿಸಿನೆಸ್ ಅವಕಾಶಗಳನ್ನು ಕಂಡುಕೊಳ್ಳಲು ಎಕ್ಸ್‌ಪೋ ಉತ್ತಮ ವೇದಿಕೆಯಾಗಲಿದೆ. ಸಾರ್ವಜನಿಕರಿಗೆ ಶಾಪಿಂಗ್, ಆಹಾರ, ಮನರಂಜನೆ ಹಾಗೂ ವಿವಿಧ ಚಟುವಟಿಕೆಗಳ ಅನುಭವ ಒದಗಿಸುವುದು ಉದ್ದೇಶವಾಗಿದೆ ಎಂದರು.

ಎಕ್ಸ್‌ಪೋ ಅಂಗವಾಗಿ ‘ಫುಡ್ ಫೆಸ್ಟ್’ ಆಯೋಜಿಸಲಾಗಿದ್ದು, 10ಕ್ಕೂ ಅಧಿಕ ಆಹಾರ ಮಳಿಗೆಗಳಲ್ಲಿ ವಿವಿಧ ಬಗೆಯ ಪಾಕಪದ್ಧತಿಗಳನ್ನು ಸವಿಯುವ ಅವಕಾಶವಿದೆ. ಮಕ್ಕಳ ಪ್ರತಿಭೆ ಹಾಗೂ ಸೃಜನಶೀಲತೆಗೆ ಉತ್ತೇಜನ ನೀಡಲು ಸೆ.27ರಂದು ಚಿತ್ರಕಲಾ ಮತ್ತು ಚೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚಿತ್ರಕಲಾ ಸ್ಪರ್ಧೆಗೆ ಬೆಳಗ್ಗೆ 9.30ಕ್ಕೆ ವರದಿ ಮಾಡಿಕೊಳ್ಳಬೇಕಿದ್ದು, 10ರಿಂದ ಮಧ್ಯಾಹ್ನ 1.30ರವರೆಗೆ ಸ್ಪರ್ಧೆ ನಡೆಯಲಿದೆ.
ಮೂರು ದಿನಗಳ ಎಕ್ಸ್‌ಪೋಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿವಿಧ ಬ್ರಾಂಡ್‌ಗಳು ಹಾಗೂ ಉತ್ಪನ್ನಗಳನ್ನು ಪರಿಚಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಪ್ರಾಯೋಜಕ ಅಗರಿ ರಾಘವೇಂದ್ರ ರಾವ್, ಸಹ ಅಧ್ಯಕ್ಷೆ ಸುಶ್ಮಿತಾ ಕಾಮತ್, ಪ್ರಚಾರ ವಿಭಾಗದ ಮುಖ್ಯಸ್ಥ ಡಾ. ಸಚಿನ್ ನಡ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

