ತುಳುವನ್ನು ಎಂಟನೇ ಅನುಸೂಚಿಗೆ ಸೇರಿಸಬೇಕು: ಎಎಪಿ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಲು ಸರ್ಕಾರ ಮುಂದಾಗಿರುವುದನ್ನು ಸ್ವಾಗತಿಸುತ್ತೇವೆ. ಆದರೆ ತುಳುವನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಒತ್ತಾಯಿಸಿದರು.

ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಕೈಗೊಳ್ಳಲಾಗುತ್ತಿರುವ ಹಲವು ಪ್ರವಾಸೋದ್ಯಮ ಯೋಜನೆಗಳು ಸ್ಥಳೀಯ ಯುವಕರಿಗೆ ನಿರೀಕ್ಷಿತ ಉದ್ಯೋಗ ಸೃಷ್ಟಿಸುವುದಿಲ್ಲ ಎಂದು ಟೀಕಿಸಿದರು. ಮಂಗಳೂರು ಲೈಟ್‌ಹೌಸ್‌ ಪ್ರದೇಶದ ₹60.34 ಕೋಟಿ ಯೋಜನೆ, ಗುರುಪುರ ನದಿ ಮತ್ತು ದ್ವೀಪಗಳ ₹125.43 ಕೋಟಿ ಯೋಜನೆ, ಕೊಡಿಕಲ್‌ನ ₹73 ಕೋಟಿ ರಿವರ್‌ಫ್ರಂಟ್ ಯೋಜನೆ ಹಾಗೂ ತಣ್ಣೀರುಬಾವಿಯ ₹53 ಕೋಟಿ ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಯೋಜನೆಗಳು ಸರ್ಕಾರದ ಅಧಿಕೃತ ಪ್ರಸ್ತಾವನೆಗಳ ಭಾಗವಾಗಿವೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 12 ದ್ವೀಪಗಳ ಅಭಿವೃದ್ಧಿ ಪರಿಸರದ ಮೇಲೆ ಪರಿಣಾಮ ಬೀರದಂತೆ ಕೈಗೊಳ್ಳಬೇಕು. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ ಕರಾವಳಿಯುದ್ದಕ್ಕೂ ತರಬೇತಿ ಪಡೆದ ಜೀವರಕ್ಷಕರನ್ನು ನೇಮಿಸುವುದು ಸೇರಿದಂತೆ ಮಾನವ ಸಂಪನ್ಮೂಲದಲ್ಲಿ ಹೂಡಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಕಯಾಕಿಂಗ್, ಸ್ಕೂಬಾ ಡೈವಿಂಗ್, ಸರ್ಫಿಂಗ್, ಸ್ನಾರ್ಕೆಲಿಂಗ್, ಜಿಪ್‌ಲೈನಿಂಗ್ ಹಾಗೂ ಬೆಟ್ಟ ಹತ್ತುವಂತಹ ಸಾಹಸ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ತುಳು ಸಿನಿಮಾ, ಯಕ್ಷಗಾನ ಹಾಗೂ ಸ್ಥಳೀಯ ಕಲಾವಿದರಿಗೆ ನೆರವು ನೀಡುವ ಮೂಲಕ ಸ್ಥಳೀಯ ಉದ್ಯೋಗಾವಕಾಶ ಸೃಷ್ಟಿಸಬೇಕು ಎಂದು ಒತ್ತಾಯಿಸಿದರು.

ಅನಗತ್ಯ ನಿರ್ಮಾಣ ಕಾಮಗಾರಿಗಳಿಗೆ ಹಣ ವ್ಯಯಿಸುವ ಬದಲು ಸ್ಥಳೀಯ ಜನರನ್ನು ಒಳಗೊಂಡ ಹಾಗೂ ಕರಾವಳಿಯ ಯುವಕರಿಗೆ ಉದ್ಯೋಗ ಕಲ್ಪಿಸುವ ವಾಸ್ತವಿಕ ಪ್ರವಾಸೋದ್ಯಮ ಯೋಜನೆ ರೂಪಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಸಾರ್ವಜನಿಕ ಸಂವಾದ ನಡೆಸಲು ಎಎಪಿ ಸಿದ್ಧವಿದೆ ಎಂದು ವಿವೇಕಾನಂದ ಸಾಲಿನ್ಸ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ದ.ಕ. ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ವಾಸುದೇವ್, ಕಬೀರ್ ಕಾಟಿಪಳ್ಳ, ಗ್ಲಾವಿನ್ ಡಿಸೋಜ ಹಾಗೂ ನಿನಾ ರೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!