ಮಂಜೇಶ್ವರ : ತುಳುನಾಡಿನ ಗಡಿ ಭಾಗದಲ್ಲಿ ಗ್ರಾಮೀಣ ಕಬಡ್ಡಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡಲಾಗಿದೆ. ಸ್ಥಳೀಯ ಕಬಡ್ಡಿ ತಂಡಗಳ ಜಂಟಿ ಸಹಕಾರದೊಂದಿಗೆ ನಡೆದ ಸಭೆಯಲ್ಲಿ ತುಳುನಾಡು ಬಾರ್ಡರ್ ಕಬಡ್ಡಿ ಟೀಮ್ಸ್ ಕಮಿಟಿಯನ್ನು ರಚಿಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಈ ಭಾಗದ ಕಬಡ್ಡಿ ಕ್ರೀಡೆಯ ಮುಂದಿನ ಬೆಳವಣಿಗೆ, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ಉತ್ತಮ ಗುಣಮಟ್ಟದ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಕಬಡ್ಡಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ವಿವಿಧ ವಿಚಾರಗಳು, ಅನುಮಾನಗಳು ಹಾಗೂ ಸಲಹೆಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು.

ಕಬಡ್ಡಿ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಉದ್ದೇಶದಿಂದ ಗೌರವ ಸಲಹೆಗಾರರ ಸಮಿತಿ ಹಾಗೂ Executive Committeeಯನ್ನು ರಚಿಸಲಾಯಿತು.ನೂತನ Executive Committeeಯ ಅಧ್ಯಕ್ಷರಾಗಿ ಭವನ್ ಕುಂಜತ್ತೂರು, ಉಪಾಧ್ಯಕ್ಷರಾಗಿ ಮಹೇಶ್ ಬೈಕಟ್ಟೆ, ಕಾರ್ಯದರ್ಶಿಯಾಗಿ ಪ್ರಕಾಶ್ ಕಲ್ಲಿಗೆ ಹಾಗೂ ಜಂಟಿ ಕಾರ್ಯದರ್ಶಿಗಳಾಗಿ ಕೋಟಿ ಕುಂಬ್ಳೆ ಮತ್ತು ಅಜೀಜ್ ಕಣಿಯಾಲ ಅವರನ್ನು ಆಯ್ಕೆ ಮಾಡಲಾಗಿದೆ.

ಗೌರವ ಸಲಹೆಗಾರರ ಸಮಿತಿಯ ಗೌರವಾಧ್ಯಕ್ಷರಾಗಿ ಸುರೇಶ್ ಶೆಟ್ಟಿ – ಕುಂಜತ್ತೂರು, ಉಪಾಧ್ಯಕ್ಷರಾಗಿ ಅನ್ಸಾರ್ ಅಂಗಡಿಮೊಗೇರು ಹಾಗೂ ಕಾರ್ಯದರ್ಶಿಯಾಗಿ ಮುನೀರ್ ಕುಂಜತ್ತೂರು ಅವರನ್ನು ನೇಮಕ ಮಾಡಲಾಗಿದೆ.
ಇದರೊಂದಿಗೆ ಒಟ್ಟು 22 ಸದಸ್ಯರ Executive Committeeಯನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಕಬಡ್ಡಿ ತಂಡಗಳ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ.

ಎಲ್ಲಾ ತಂಡಗಳ ಮಾಲೀಕರು, ಆಟಗಾರರು ಹಾಗೂ ಕಬಡ್ಡಿ ಪ್ರಿಯರು ಒಗ್ಗಟ್ಟಿನಿಂದ ಕೈಜೋಡಿಸುವ ಮೂಲಕ ಗ್ರಾಮೀಣ ಕಬಡ್ಡಿಯನ್ನು ಮತ್ತಷ್ಟು ಬೆಳೆಸಲು ಮತ್ತು ಉತ್ತಮ ಪಂದ್ಯಾವಳಿಗಳನ್ನು ನಡೆಸಲು ಸಹಕರಿಸುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ.
ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಮಯ, ಅಭಿಪ್ರಾಯ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಸಮಿತಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.


