ಕಾಸರಗೋಡು ದಸರಾ ಉದ್ಘಾಟಕರಾಗಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಕಾಸರಗೋಡು: ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ, ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಳೆದ 2007ರಿಂದ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪುನರುತ್ಥಾನದ ಉದ್ದೇಶದಿಂದ ಆಯೋಜಿಸಿಕೊಂಡು ಬರುತ್ತಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ’ ಈ ಬಾರಿ ಅ.11ರಿಂದ 20ರವರೆಗೆ ನಡೆಯಲಿದೆ.

ದಸರಾ ಅಂಗವಾಗಿ ಹತ್ತು ದಿನಗಳ ಕಾಲ ಸಂಕೀರ್ತನಾ ದಶಾಹ, ಕವಿ ಸಮ್ಮೇಳನ, ಕಾಸರಗೋಡು ದಸರಾ ಕವಿ ಗೋಷ್ಠಿ, ನೃತ್ಯ, ಸಂಗೀತ, ಯಕ್ಷಗಾನ ವೈಭವ, ಭಕ್ತಿ ಗಾಯನ, ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಬಾರಿ ಅಂತರ್ ಜಿಲ್ಲಾ ಮಟ್ಟದ ಸುಮಾರು 28 ಭಜನಾ ಸಂಕೀರ್ತನಾ ತಂಡಗಳು ಭಾಗವಹಿಸಲಿವೆ. ಕಾಸರಗೋಡು ದಸರಾ ಕವಿ ಸಮ್ಮೇಳನ ಹಾಗೂ ಕವಿಗೋಷ್ಠಿಯಲ್ಲಿ ಅಂತರ್ ರಾಜ್ಯ ಮಟ್ಟದ 61 ಖ್ಯಾತ ಕವಿಗಳು ಪಾಲ್ಗೊಳ್ಳಲಿದ್ದು, ಭಾಗವಹಿಸುವ ಎಲ್ಲ ಕವಿಗಳನ್ನು ‘ಕಾಸರಗೋಡು ದಸರಾ ಕವಿ ಸಾಧಕ ಸನ್ಮಾನ’ ನೀಡಿ ಗೌರವಿಸಲಾಗುವುದು. ಕೇರಳ ಮತ್ತು ಕರ್ನಾಟಕದ 21 ಮಂದಿ ಶ್ರೇಷ್ಠ ಕವಿಗಳಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ಶ್ರೀ ಗುರುರಾಜ್ ಕಾಸರಗೋಡು ಅವರ ಸಾರಥ್ಯದಲ್ಲಿ ನೃತ್ಯ-ಗಾನ ವೈಭವ, ಕಲಾವಿದರ ಕಲರವ, ಶ್ರೀ ವಸಂತ ಬಾರಡ್ಕ ತಂಡದಿಂದ ಭಕ್ತಿ ಗಾಯನಾರ್ಚನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಅ.20ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾಸರಗೋಡು ದಸರಾ ಉದ್ಘಾಟನಾ ಸಮಾರಂಭವನ್ನು ಶ್ರೀ ಮಡೆದನೀರು ಮಠದ ಅಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.

ಕನ್ನಡ ಭವನದ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯಕ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!