ಮಂಜೇಶ್ವರ: ಕೋ-ಆಪರೇಟಿವ್ ಬ್ಯಾಂಕ್ ಮಹಾಸಭೆ ಜೊತೆ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಂಭ್ರಮ

​ಮಂಜೇಶ್ವರ: ಸ್ಥಳೀಯವಾಗಿ ಅತ್ಯಂತ ಪ್ರಭಾವಶಾಲಿ ಸಹಕಾರಿ ಸಂಸ್ಥೆಯಾಗಿ ಬೆಳೆದು ನಿಂತಿರುವ ‘ಮಂಜೇಶ್ವರ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಮಂಜೇಶ್ವರ ಎಸ್ ಎ ಟಿ ಶಾಲಾ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಇದೇ ಸಂದರ್ಭದಲ್ಲಿ 2025-26 ನೇ ಶೈಕ್ಷಣಿಕ ವರ್ಷದಲ್ಲಿ ವಿವಿಧ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಫಲಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷರಾದ ಶ್ರೀಯಂತ ಎಸ್. ರಾಮಚಂದ್ರ ಅವರು ಮಾತನಾಡಿ “ನಮ್ಮ ಬ್ಯಾಂಕಿನ ಪ್ರತಿಯೊಂದು ಬೆಳವಣಿಗೆ ಹಾಗೂ ಪ್ರಗತಿಯ ಹಿಂದೆ ನಮ್ಮ ಗೌರವಾನ್ವಿತ ಸದಸ್ಯರು ಮತ್ತು ಗ್ರಾಹಕರು ಇಟ್ಟಿರುವ ಅಪಾರ ನಂಬಿಕೆ ಮತ್ತು ನಿರಂತರ ಸಹಕಾರವೇ ಪ್ರಮುಖ ಕಾರಣವಾಗಿದೆ. ಎಂದು ಹೇಳಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.

​ಬ್ಯಾಂಕಿನ ಮುಖ್ಯ ಕಾರ್ಯದರ್ಶಿ ಪಿ. ರಾಜನ್ ನಾಯರ್ ಅವರು 2025-26 ಸಾಲಿನ ಆಯ-ವ್ಯಯ ಲೆಕ್ಕಪತ್ರ, ಕರಡು ಬಜೆಟ್ ಹಾಗೂ ಸುದೀರ್ಘ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟು ಮಂಡಿಸಿ ಮಾತನಾಡಿ :ಕಳೆದ ಹಲವು ದಶಕಗಳಿಂದ ನಮ್ಮ ಬ್ಯಾಂಕ್ ನಿರಂತರವಾಗಿ ಲಾಭದಾಯಕ ಹಾದಿಯಲ್ಲಿದ್ದು, ಆಡಿಟ್ ಕ್ಲಾಸಿಫಿಕೇಶನ್‌ನಲ್ಲಿ ‘ಎ’ ಗ್ರೇಡ್ ಕಾಯ್ದುಕೊಂಡಿದೆ ಎಂದು ಹೇಳಿ ವರದಿ ಮಂಡಿಸಿದರು.

1940 ರಲ್ಲೇ ತನ್ನ ಸೇವೆಯನ್ನು ಆರಂಭಿಸಿದ ಈ ಸಂಸ್ಥೆಯು, 1996 ರಲ್ಲಿ ‘ಕ್ಲಾಸ್-1 ಸ್ಪೆಷಲ್ ಗ್ರೇಡ್’ ಹಾಗೂ 2014 ರಿಂದ ‘ಕ್ಲಾಸ್-1 ಸೂಪರ್ ಗ್ರೇಡ್’ ಬ್ಯಾಂಕ್ ಆಗಿ ಭದ್ರವಾದ ಅಡಿಪಾಯದೊಂದಿಗೆ ಬೆಳೆದು ಬಂದಿದೆ. ಪ್ರಸ್ತುತ ಬ್ಯಾಂಕಿಂಗ್ ವ್ಯವಹಾರಗಳ ಜೊತೆಗೆ ಗ್ರಾಹಕರ ದಿನನಿತ್ಯದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿಯೂ ವಿವಿಧ ಸಹಕಾರಿ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಹಕರ ತೃಪ್ತಿಯೇ ಬ್ಯಾಂಕಿನ ಪರಮ ಗುರಿಯನ್ನಾಗಿಸಿ ಮುಂದುವರಿಯುತ್ತಿದೆ.

ಆಡಿಟ್ ಅಸಿಸ್ಟೆಂಟ್ ಡೈರೆಕ್ಟರ್ ಶ್ರೀ ಎ. ಜಯಚಂದ್ರನ್ ಮತ್ತು ಜಂಟಿ ನಿರ್ದೇಶಕರಾದ ಶ್ರೀ ಟಿ. ಎಂ. ಮ್ಯಾಥ್ಯೂ ಅವರ ಆಡಿಟ್ ಪ್ರಮಾಣಪತ್ರದ ಪ್ರಕಾರ ಈ ವರ್ಷ ಬ್ಯಾಂಕ್ ರೂ. 90.88 ಲಕ್ಷ ಅಂತಿಮ ನಿವ್ವಳ ಲಾಭ ಗಳಿಸಿದೆ. ಈ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿ, ನೌಕರ ವೃಂದ, ಸಹಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಪ್ರತಿಯೊಬ್ಬ ಗ್ರಾಹಕರಿಗೂ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿತು.

​ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಡಾ. ಕೆ. ಎ. ಖಾದರ್, ಗಣೇಶ್ ಸಿ. ಎಚ್., ವಾತಿಶ್ ಕೆ., ರಾಮಚಂದ್ರ ಕೆ., ಗಂಗಾಧರ, ಗಂಗಾಧರ ಕೆ. ಎಚ್., ರೇಖಾ, ನಾರಾಯಣಿ ಕೆ. ಹಾಗೂ ಶೇಸಮ್ಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಸಭೆಗೆ ಶುಭ ಹಾರೈಸಿದರು.

​ಸಭೆಯಲ್ಲಿ ಬ್ಯಾಂಕಿನ ಪ್ರಧಾನ ಶಾಖೆ ಸೇರಿದಂತೆ ಹೊಸಂಗಡಿ, ಕುಂಜತ್ತೂರು, ಪ್ರಭಾತ್-ಸಂಜೆಯ ಶಾಖೆ, ಉದ್ಯಾವರ, ಬಡಾಜೆ, ತಲಪಾಡಿ ಶಾಖೆಗಳ ಸಿಬ್ಬಂದಿಗಳು, ಗ್ರಾಹಕರು ಹಾಗೂ ನೂರಾರು ಸದಸ್ಯ ಬಂಧುಗಳು ಭಾಗವಹಿಸಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!