ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಕುಸಿದ ಕಾಂಕ್ರೀಟ್ ಸ್ಲ್ಯಾಬ್; ಓರ್ವ ಸಾವು, ನಾಲ್ವರಿಗೆ ಗಾಯ

ಮಂಗಳೂರು: ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ಸಂದರ್ಭದಲ್ಲಿ ಕಟ್ಟಡದ ವೆರಾಂಡಾದ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದು ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಯು ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಹಳೆಯಂಗಡಿ ನಿವಾಸಿಯಾಗಿದ್ದು ಸದ್ಯ ಪಾಂಡೇಶ್ವರದ ಫ್ಲಾಟ್ ನಲ್ಲಿ ಹೆತ್ತವರ ಜೊತೆಗೆ ವಾಸವಿದ್ದ ಮೊಯ್ದಿನ್ ಶಮ್ಮಾಸ್ (16) ಮೃತ ವಿದ್ಯಾರ್ಥಿ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಈತ ಪಿಯುಸಿ ಕಾಮರ್ಸ್ ಓದುತ್ತಿದ್ದ ಎಂದು ತಿಳಿದುಬಂದಿದೆ.

ಸರ್ವಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ನಡೆದು ಪದಾಧಿಕಾರಿಗಳ ಆಯ್ಕೆಯಾಗಿ ಪಾಂಡೇಶ್ವರದ ಎಮ್ಮೆಕೆರೆಯ ರಮಾ ಲಕ್ಷ್ಮೀನಾರಾಯಣ ಹಾಲ್ ನಲ್ಲಿ ಸೆ.26ರಂದು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಬರುತ್ತಿದ್ದಾಗ ಒಂದಷ್ಟು ವಿದ್ಯಾರ್ಥಿಗಳು ಕಟ್ಟಡದ ಮೊದಲ ಮಹಡಿಯ ವೆರಾಂಡಾದಲ್ಲಿ ವೀಕ್ಷಿಸುತ್ತ ನಿಂತಿದ್ದರು.

ಈ ವೇಳೆ, ವೆರಾಂಡಾದ ಬದಿಯ ತಡೆಗೋಡೆಗೆ ಭಾರ ಬಿದ್ದು ಕುಸಿದಿದ್ದರಿಂದ ಅಲ್ಲಿದ್ದ ವಿದ್ಯಾರ್ಥಿಗಳು ಸಹಿತ ಕಾಂಕ್ರೀಟ್ ಸ್ಲಾಬ್ ಕುಸಿದು ನೆಲಕ್ಕೆ ಬಿದ್ದಿದೆ.

ಈ ವೇಳೆ, ಮಹಮ್ಮದ್ ಶಮ್ಯಾಸ್ ಕಟ್ಟಡದ ಕೆಳಗಡೆ ನಿಂತು ರ್ಯಾಲಿ ನೋಡುತ್ತಿದ್ದಾಗ ಆತನ ತಲೆಯ ಮೇಲೆ ಸ್ಲಾಬ್ ಬಿದ್ದಿದ್ದು ತಲೆಯ ಚಿಪ್ಪು ಒಡೆದು ಹೋಗಿದೆ. ಭುಜಕ್ಕೆ ಮತ್ತು ಬೆನ್ನಿಗೆ ತೀವ್ರ ಗಾಯವಾಗಿದ್ದು ಸ್ಥಳೀಯರು ಕೂಡಲೇ ಆತನನ್ನು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ರಾತ್ರಿ 11.30ರ ವೇಳೆಗೆ ವೈದ್ಯರು ಯುವಕ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಕಟ್ಟಡದ ಮೇಲಿನಿಂದ ಬಿದ್ದ ರಭಸಕ್ಕೆ ನಾಲ್ವರು ವಿದ್ಯಾರ್ಥಿಗಳು ಕೂಡ ಗಂಭೀರ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.

ಘಟನೆ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಕಟ್ಟಡದ ಮಾಲಕ ಪರೀಕ್ಷಿತ್ ರೈ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಸ್ಥಾಪಕ ವಕೀಲ ದಿನಕರ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಟ್ಟಡ ಹಳೆಯದಾಗಿದ್ದರೂ, ಕಾರ್ಯಕ್ರಮ ಮಾಡಲು ಅವಕಾಶ ನೀಡಿರುವುದಲ್ಲದೆ, ವಿದ್ಯಾರ್ಥಿಗಳ ಜೀವದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರಿಂದ ಘಟನೆ ಸಂಭವಿಸಿದೆ ಎಂದು ಪೊಲೀಸರು ಬಿಎನ್‌ಎಸ್‌ ಸೆಕ್ಷನ್ 106(1), 125 ಎ, 125 ಬಿ ಹಾಗೂ 290 ಅಡಿ ಕೇಸು ದಾಖಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!