ಅ.2ರಂದು ಭಾರತರತ್ನ ಎಂ.ಎಸ್. ಸುಬ್ಬ ಲಕ್ಷ್ಮಿ ಅವರ 110ನೇ ವರ್ಷದ ಸಂಭ್ರಮಾಚರಣೆ

ಮಂಗಳೂರು: ಭಾರತರತ್ನ ಎಂ.ಎಸ್. ಸುಬ್ಬಲಕ್ಷ್ಮಿ ಅವರ 110ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮಣಿ ಕೃಷ್ಣ ಸ್ವಾಮಿ ಅಕಾಡೆಮಿ ಹಾಗೂ ರಾಮಕೃಷ್ಣ ಮಠದ ಸಹಯೋಗದಲ್ಲಿ ಅಕ್ಟೋಬರ್ 2ರಂದು ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಶ್ರೀ ವಿಭು ರಾವ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 2ರಂದು ಸಂಜೆ 5 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದ ನೂತನ ಅಮೃತ ಭವನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಎಂ.ಎಸ್. ಸುಬ್ಬಲಕ್ಷ್ಮಿ ಅವರ ಮೊಮ್ಮಗ ವಿ. ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಮರಿಮೊಮ್ಮಕ್ಕಳಾದ ವಿದುಷಿ ಎಸ್. ಐಶ್ವರ್ಯ ಹಾಗೂ ವಿದುಷಿ ಎಸ್. ಸೌಂದರ್ಯ ಅವರಿಂದ ವಿಶೇಷ ಸಂಗೀತ ಕಚೇರಿ ನಡೆಯಲಿದೆ. ಎಂ.ಎಸ್. ಸುಬ್ಬಲಕ್ಷ್ಮಿ ಅವರ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಇವರ ಕಾರ್ಯಕ್ರಮವು ಸಂಭ್ರಮಾಚರಣೆಯ ವಿಶೇಷ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.

ಸಂಗೀತ ಕಚೇರಿಗೆ ವಯಲಿನ್‌ನಲ್ಲಿ ವಿದುಷಿ ಅದಿತಿ ಕೃಷ್ಣಪ್ರಕಾಶ್, ಮೃದಂಗದಲ್ಲಿ ವಿದ್ವಾನ್ ಪುತ್ತೂರು ಟಿ. ನಿಕ್ಷಿತ್ ಹಾಗೂ ಕಂಜರದಲ್ಲಿ ವಿದ್ವಾನ್ ಆರ್. ಕಾರ್ತಿಕ್ ಸಹಕರಿಸಲಿದ್ದಾರೆ.

ವಿಶ್ವದಾದ್ಯಂತ ನಡೆಯುತ್ತಿರುವ ಎಂ.ಎಸ್. ಸುಬ್ಬಲಕ್ಷ್ಮಿ ಅವರ 110ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮಂಗಳೂರಿನಲ್ಲೂ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿಭು ರಾವ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿದುಷಿ ಗೀತಾ ಸರಳಾಯ, ನಾಗೇಶ್, ಪಿ. ನಿತ್ಯಾನಂದ, ಪ್ರೊ. ಕೃಷ್ಣಮೂರ್ತಿ ಹಾಗೂ ಚಂದ್ರಶೇಖರ್ ಕೆ. ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!