
ಕಾಸರಗೋಡು : ಇಲ್ಲಿಯ ರೈಲು ನಿಲ್ದಾಣದಲ್ಲಿ ಸೂಕ್ತ ದಾಖಲೆಗಳಿಲ್ಲದ ಸುಮಾರು 15 ಪವನ್ ಚಿನ್ನದ ಆಭರಣಗಳೊಂದಿಗೆ 63 ವರ್ಷದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ದೋಟೋಲ್ ನಿವಾಸಿ ದಿಲ್ಬಾಗ್ ಬಂಧಿತ ಆರೋಪಿಯಾಗಿದ್ದಾನೆ.

ಎಸ್ ಐ ಸಿಎಸ್ ಸುನಿಲ್ ಕುಮಾರ್ ಮತ್ತು ತಂಡ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿತ್ತು. ಈ ವೇಳೆ ಪ್ಲಾಟ್ಫಾರ್ಮ್ನಲ್ಲಿ ಅನುಮಾನಾಸ್ಪದವಾಗಿ ಕಂಡ ಮಧ್ಯವಯಸ್ಕನನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ದೊರಕಲಿಲ್ಲ. ಆತನ ಬ್ಯಾಗ್ ತಪಾಸಣೆ ಮಾಡಿದಾಗ ಸುಮಾರು 15 ಪವನ್ ಚಿನ್ನಾಭರಣಗಳು ಪತ್ತೆಯಾದವು.

ಚಿನ್ನದ ಮೂಲದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲನಾದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ನಡೆಸಿದಾಗ, ಶೋರ್ನೂರು ಮತ್ತು ಕೋಝಿಕ್ಕೋಡ್ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಕಳ್ಳತನ ಪ್ರಕರಣಗಳಿರುವುದು ತಿಳಿದುಬಂತು.

ಕದ್ದ ಚಿನ್ನವಾಗಿರಬಹುದೆಂಬ ಶಂಕೆಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಯಿತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

