
ಕಾಸರಗೋಡು : ಇಲ್ಲಿಯ ನಾಲ್ಕನೇ ಮೈಲು ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ 20 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಕಳನಾಡ್ ವಳ್ಳಿಯೋಡ್ ನಿವಾಸಿ ಅಶ್ರಫ್ ಮಯ್ಯ ಅವರ ಪುತ್ರ ಆದಿಲ್ ಅಹಮ್ಮದ್ ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ಸಹ ಸವಾರ ಬೀಜಂತಡುಕ್ಕದ ಬಿ. ಮುಹಮ್ಮದ್ ಆದಿಲ್ ಕೂಡ ಗಾಯಗೊಂಡಿದ್ದಾರೆ.

ಕಳೆದ ಶುಕ್ರವಾರ ಚೆಂಗಳ ನಾಲ್ಕನೇ ಮೈಲಿನ ಯೂಸ್ಡ್ ಕಾರ್ ಶೋರೂಮ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ನಾಲ್ಕನೇ ಮೈಲಿನಿಂದ ಚೆಂಗಳ ಕಡೆಗೆ ತೆರಳುತ್ತಿದ್ದ ಬೈಕ್ಗೆ, ಎದುರುಗಡೆಯಿಂದ ಬಂದ ಕಾರು ಸೂಚನೆ ನೀಡದೆ ಬಲಕ್ಕೆ ತಿರುಗಿದಾಗ ಡಿಕ್ಕಿಯಾಗಿದೆ. ಬೈಕ್ ಹಿಂಬದಿ ಸವಾರರಾಗಿದ್ದ ಆದಿಲ್ ಅವರನ್ನು ಕಾಸರಗೋಡು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಇದೀಗ ಕೊನೆಯುಸಿರೆಳೆದಿದ್ದಾರೆ.

ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದು, ಭಾನುವಾರ ಬೆಳಿಗ್ಗೆ ಮೇಲ್ಪ್ಪರಂಬ್ ಜುಮಾ ಮಸೀದಿ ಖಬರ್ಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

