ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳು, ಪಟ್ಟಣಗಳು ಹಾಗೂ ಗ್ರಾಮಗಳ ಜನಾಭಿಪ್ರಾಯವನ್ನು ಪಡೆದು, ಐತಿಹಾಸಿಕ ‘ದಕ್ಷಿಣ ಕನ್ನಡ’ ಹೆಸರನ್ನೇ ಮುಂದುವರಿಸಬೇಕು ಎಂದು ‘ದಕ್ಷಿಣ ಕನ್ನಡ ಉಳಿಸಿ ವೇದಿಕೆ’ ಒತ್ತಾಯಿಸಿದೆ. ಜಿಲ್ಲೆ ಮರುನಾಮಕರಣ ಕುರಿತು ಸರ್ಕಾರ ಸಾರ್ವಜನಿಕರ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿರುವ ಹಿನ್ನೆಲೆಯಲ್ಲಿ ವೇದಿಕೆಯ ಮನವಿ ಮಹತ್ವ ಪಡೆದಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖ ವಿಲಿಯಮ್ ಪಾಯ್ಸ್, ‘ದಕ್ಷಿಣ ಕನ್ನಡ’ ಹೆಸರು ಈ ಪ್ರದೇಶದ ವಿಶಾಲ ಭೌಗೋಳಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ. ಮಂಗಳೂರು ಜಿಲ್ಲೆಯ ಆಡಳಿತಾತ್ಮಕ ಕೇಂದ್ರವಾಗಿದ್ದು, ತನ್ನದೇ ಆದ ಮಹತ್ವ ಹೊಂದಿದೆ. ಆದರೆ ಜಿಲ್ಲೆಯ ಹೆಸರನ್ನು ಮಂಗಳೂರಿನ ಹೆಸರಿನಿಂದ ಬದಲಾಯಿಸುವುದು ಮಂಗಳೂರಿನ ಹೊರತಾದ ಪ್ರದೇಶಗಳ ಐತಿಹಾಸಿಕ ಅಸ್ತಿತ್ವವನ್ನೂ ಪರಿಗಣಿಸಬೇಕಾದ ವಿಷಯವಾಗಿದೆ ಎಂದರು.

‘ದಕ್ಷಿಣ ಕನ್ನಡ’ ಎಂಬ ಹೆಸರು ದೀರ್ಘ ಆಡಳಿತಾತ್ಮಕ ಮತ್ತು ಐತಿಹಾಸಿಕ ನಿರಂತರತೆಯನ್ನು ಹೊಂದಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳು ಈ ಹೆಸರಿನೊಂದಿಗೆ ಗುರುತಿಸಿಕೊಂಡಿವೆ. 1997ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆ ಪ್ರತ್ಯೇಕವಾದ ಬಳಿಕವೂ ಉಳಿದ ಜಿಲ್ಲೆಗೆ ‘ದಕ್ಷಿಣ ಕನ್ನಡ’ ಎಂಬ ಹೆಸರೇ ಮುಂದುವರಿದಿದೆ ಎಂದು ಹೇಳಿದರು.
ಹೆಸರು ಬದಲಾವಣೆಯಿಂದ ಸರ್ಕಾರಿ ಹಾಗೂ ಆಡಳಿತಾತ್ಮಕ ದಾಖಲೆಗಳು, ಶೈಕ್ಷಣಿಕ ಮತ್ತು ಕಾನೂನು ದಾಖಲೆಗಳು, ಪುಸ್ತಕಗಳು, ನಕ್ಷೆಗಳು ಹಾಗೂ ವಿವಿಧ ಸಾಂಸ್ಕೃತಿಕ ಉಲ್ಲೇಖಗಳಲ್ಲಿ ಬದಲಾವಣೆ ಮಾಡುವ ಅಗತ್ಯ ಎದುರಾಗಬಹುದು. ಆದ್ದರಿಂದ ಸರ್ಕಾರ ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗದೆ ಜಿಲ್ಲೆಯ ಎಲ್ಲ ತಾಲೂಕುಗಳ ಜನರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.

ಇದು ಮಂಗಳೂರಿನ ವಿರುದ್ಧದ ಬೇಡಿಕೆಯಲ್ಲ. ಮಂಗಳೂರು ದಕ್ಷಿಣ ಕನ್ನಡದ ಪ್ರಮುಖ ಕೇಂದ್ರವಾಗಿ ತನ್ನದೇ ಆದ ಸ್ಥಾನಮಾನ ಹೊಂದಿದೆ. ‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನು ಉಳಿಸುವ ಮೂಲಕ ಜಿಲ್ಲೆಯ ಭೌಗೋಳಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಅಸ್ತಿತ್ವವನ್ನು ಸಂರಕ್ಷಿಸಬೇಕು ಎಂದು ವಿಲಿಯಮ್ ಪಾಯ್ಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಬೆನೆಟ್ ಅಮ್ಮಣ್ಣ, ಪ್ರೊ. ಕೃಷ್ಣಮೂರ್ತಿ ಹಾಗೂ ಸ್ಟೀವನ್ ಪಾಯ್ಸ್ ಉಪಸ್ಥಿತರಿದ್ದರು.

