ವಿಶ್ವ ಹೃದಯ ದಿನ: ಇಂಡಿಯಾನಾ ಆಸ್ಪತ್ರೆಯಿಂದ ವಿಶೇಷ ಹೃದಯ ಆರೋಗ್ಯ ಪ್ಯಾಕೇಜ್

ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ನಗರದ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ವಿಶೇಷ ರಿಯಾಯಿತಿ ದರದಲ್ಲಿ ‘ಹೃದಯ ಆರೋಗ್ಯ ಪ್ಯಾಕೇಜ್’ ಘೋಷಿಸಿದೆ. ₹3,000 ಮೌಲ್ಯದ ಪ್ಯಾಕೇಜ್‌ನ್ನು ₹1,499ಕ್ಕೆ ನೀಡಲಾಗುತ್ತಿದ್ದು, ಈ ಕೊಡುಗೆ ಅ.20ರವರೆಗೆ ಲಭ್ಯವಿರಲಿದೆ ಎಂದು ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಹೃದ್ರೋಗ ತಜ್ಞ ಡಾ. ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.

ಪ್ಯಾಕೇಜ್‌ನಲ್ಲಿ ಎಕೋ ಅಥವಾ ಟಿಎಂಟಿ, ಲಿಪಿಡ್ ಪ್ರೊಫೈಲ್, ಕ್ರಿಯೇಟಿನೈನ್, ಆರ್‌ಬಿಎಸ್, ಇಸಿಜಿ, ಆಹಾರ ಸಲಹೆ ಹಾಗೂ ಹೃದ್ರೋಗ ತಜ್ಞರ ಸಮಾಲೋಚನೆ ಒಳಗೊಂಡಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಯೂಸುಫ್ ಕುಂಬ್ಳೆ, ಸೆ.29ರಂದು ಆಚರಿಸಲಾಗುವ ವಿಶ್ವ ಹೃದಯ ದಿನದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಣ್ಣ ನಡಿಗೆ, ಕೆಲಸಕ್ಕೆ ಸೈಕಲ್ ಬಳಕೆ ಅಥವಾ ರಾತ್ರಿ ಊಟದಲ್ಲಿ ಆರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳುವಂತಹ ಪ್ರತಿಯೊಂದು ಸಣ್ಣ ಬದಲಾವಣೆಯೂ ಹೃದಯದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲದು. ಹೀಗಾಗಿ ದೈನಂದಿನ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.

ವಿಶ್ವ ಹೃದಯ ಒಕ್ಕೂಟವು 2026ರ ವಿಶ್ವ ಹೃದಯ ದಿನದ ಅಂಗವಾಗಿ ‘ಡೋಂಟ್ ಮಿಸ್ ಎ ಬೀಟ್’ ಎಂಬ ಘೋಷವಾಕ್ಯವನ್ನು ಪ್ರಕಟಿಸಿದೆ. ಕನಿಷ್ಠ ಗಾಯದೊಂದಿಗೆ ನಡೆಸುವ ಶಸ್ತ್ರಚಿಕಿತ್ಸೆಗಳು ಆಧುನಿಕ ಹೃದಯ ಚಿಕಿತ್ಸೆಯಲ್ಲಿ ಪ್ರಮುಖ ಪ್ರಗತಿಯಾಗಿದ್ದು, ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಧುನಿಕ ಹೃದ್ರೋಗ ಚಿಕಿತ್ಸಾ ವಿಧಾನಗಳು ಹಾಗೂ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಕನಿಷ್ಠ ಗಾಯದ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳ ಪ್ರಮುಖ ಭಾಗವಾಗಿ ಮಾಡಿಕೊಂಡಿದ್ದು, ನಿಯಮಿತವಾಗಿ ನಡೆಸಲಾಗುತ್ತಿದೆ. ಹೃದಯ ಕಸಿ ಚಿಕಿತ್ಸೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿಯೂ ಆಸ್ಪತ್ರೆ ಸಜ್ಜಾಗುತ್ತಿದೆ ಎಂದು ಡಾ. ಯೂಸುಫ್ ಕುಂಬ್ಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರತೀಕ್ ವಾಸ್ವಾನಿ ಹಾಗೂ ಮಾರುಕಟ್ಟೆ ಸಲಹೆಗಾರ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!