ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಪ್ರಕೋಷ್ಠದ ನೂತನ ಜಿಲ್ಲಾ ಸಮಿತಿ ರಚನೆಯಾಗಿದ್ದು, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸೆ.26ರಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.



ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ವಸಂತಕುಮಾರ್ ಮಂಜನಾಡಿ ಅವರನ್ನು ಜಿಲ್ಲಾ ಸಂಚಾಲಕರಾಗಿ ಹಾಗೂ ನಾರಾಯಣ ಗೌಡ ಬಂಟ್ವಾಳ ಅವರನ್ನು ಸಹ ಸಂಚಾಲಕರಾಗಿ ನೇಮಕ ಮಾಡಲಾಯಿತು. ಸುರೇಶ್ ಭಂಡಾರಿ (ಮೂಡುಬಿದಿರೆ), ವಿನೀತ್ ನಾಯರ್ (ಮಂಗಳೂರು ಉತ್ತರ), ಸತ್ಯನಾರಾಯಣ ಭಟ್ (ಮಂಗಳೂರು ದಕ್ಷಿಣ), ಸುರೇಶ್ ಎಂ.ಎಸ್. (ಬೆಳ್ತಂಗಡಿ), ಮನಮೋಹನ್ (ಸುಳ್ಯ), ರಾಜೇಂದ್ರ ಮಾಸ್ಟರ್ (ಪುತ್ತೂರು), ಕೆ.ಬಾಬು (ಮಂಗಳೂರು ದಕ್ಷಿಣ ಸಂಚಾಲಕ) ಹಾಗೂ ವಸಂತ್ ರೈ ಬಿ.ಕೆ. (ಮಂಗಳೂರು ಮಂಡಲ ಸಂಚಾಲಕ) ಅವರನ್ನು ವಿವಿಧ ಜವಾಬ್ದಾರಿಗಳಿಗೆ ನೇಮಿಸಲಾಯಿತು.

ಸಭೆಯಲ್ಲಿ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಹಾಗೂ ಬಿಜೆಪಿ ಸೇವಾ ಸಂಕಲ್ಪದ ‘ಬದಲಾವಣೆಯ ಕಥೆ’ ಕಾರ್ಯಕ್ರಮದ ರಾಜ್ಯ ಸಹ ಉಸ್ತುವಾರಿ ಎಂ.ಜಿ. ಭಟ್ ಕುಮಟಾ ಭಾಗವಹಿಸಿ, ‘ಬದಲಾವಣೆಯ ಕಥೆ’ ಕಾರ್ಯಕ್ರಮದ ಚಟುವಟಿಕೆಗಳಲ್ಲಿ ಪ್ರಕೋಷ್ಠದ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದರು. ಇದೇ ವೇಳೆ ಜಿಲ್ಲಾ ಹಾಗೂ ಮಂಡಲ ಮಟ್ಟದಲ್ಲಿ ಪ್ರಕೋಷ್ಠದ ಸಮಿತಿಗಳ ರಚನೆ ಮತ್ತು ಕಾರ್ಯಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಠದ ಸದಸ್ಯ ಮತ್ತು ದಕ್ಷಿಣ ಕನ್ನಡ ಶಿಕ್ಷಣ ಪ್ರಕೋಷ್ಠದ ಉಸ್ತುವಾರಿ ಮುರಳಿ ಹೊಸಮಜಲು ಉಪಸ್ಥಿತರಿದ್ದು, ನೂತನ ಸಮಿತಿಯ ಸದಸ್ಯರಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಜಿಲ್ಲಾ ಸಂಚಾಲಕ ವಸಂತಕುಮಾರ್ ಮಂಜನಾಡಿ ವಂದನಾರ್ಪಣೆ ಸಲ್ಲಿಸಿದರು.

