ಕಾಸರಗೋಡು: ಪಾಠ ಕಲಿಯಲಿಲ್ಲವೆಂಬ ಕಾರಣಕ್ಕೆ 12 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದ ಮದ್ರಸಾ ಉಸ್ತಾದ್ಗೆ ಬೇಕಲ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಮಲಪ್ಪುರಂ ಮೂಲದ ಈ ಅಧ್ಯಾಪಕನನ್ನು ಘಟನೆಗೆ ಸಂಬಂಧಿಸಿ ಮದ್ರಸಾ ಸಮಿತಿ ಈಗಾಗಲೇ ಕೆಲಸದಿಂದ ಅಮಾನತುಗೊಳಿಸಿದೆ.
ಹಲ್ಲೆಯ ಭಯದಿಂದ ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಮಂಗಳೂರಿನಲ್ಲಿ ಪತ್ತೆಯಾದ ಆಕೆ, ಪೊಲೀಸರ ವಿಚಾರಣೆ ವೇಳೆ ಶಿಕ್ಷಕರ ಹಲ್ಲೆಗೆ ಹೆದರಿ ತಾನೇ ರೈಲು ಹತ್ತಿ ಬಂದಿರುವುದಾಗಿ ಸತ್ಯ ಬಿಚ್ಚಿಟ್ಟಿದ್ದಳು.

ಬಾಲಕಿಯ ಕುಟುಂಬಸ್ಥರು ಅಧಿಕೃತ ದೂರು ನೀಡದ ಹಿನ್ನೆಲೆಯಲ್ಲಿ, ಠಾಣೆಗೆ ಹಾಜರಾದ ಉಸ್ತಾದ್ಗೆ ಪೊಲೀಸರು ಕಟ್ಟುನಿಟ್ಟಿನ ತಾಕೀತು ನೀಡಿ ಬಿಡುಗಡೆ ಮಾಡಿದ್ದಾರೆ.

