ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪೆರಿಂಗಡಿ ಕರಾವಳಿ ತೀರದಲ್ಲಿ ಕಳೆದ ಒಂದು ವಾರದಿಂದ ಕಡಲ್ಕೊರೆತ ಭೀಕರ ಸ್ವರೂಪ ಪಡೆದಿದ್ದು, ರಸ್ತೆ ಹಾಗೂ ಮೈದಾನಗಳು ಈಗಾಗಲೇ ಸಮುದ್ರಪಾಲಾಗಿವೆ.

ಕಳೆದ ವರ್ಷವೇ ಪೆರಿಂಗಡಿ-ಮುಟ್ಟಂಗೇಟ್ ತೀರದ ರಸ್ತೆ ಕೊಚ್ಚಿಹೋಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಅಲೆಗಳ ಆರ್ಭಟಕ್ಕೆ ಹಿಂದೆ ಹಾಕಲಾಗಿದ್ದ ಮರಳು ಚೀಲಗಳೂ ಕೊಚ್ಚಿಹೋಗುತ್ತಿದ್ದು, ತೀರದ ಕುಟುಂಬಗಳು ತೀವ್ರ ಆತಂಕದಲ್ಲಿ ದಿನ ದೂಡುವಂತಾಗಿದೆ.

ಅಲೆಗಳ ರಭಸ ಹೀಗೆಯೇ ಮುಂದುವರಿದಲ್ಲಿ ಅಪಾಯದ ಅಂಚಿನಲ್ಲಿರುವ ಮನೆಗಳು ಜಲಸಮಾಧಿಯಾಗುವ ಭೀತಿಯಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಆಡಳಿತ ವರ್ಗ ತಕ್ಷಣವೇ ಶಾಶ್ವತ ಕಡಲ್ಕೊರೆತ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

