ಮಹಾರಾಷ್ಟ್ರದಲ್ಲಿ ಜನಮನಸೆಳೆದ ಕನ್ನಡಿಗರ ‘ಗಣಪತಿ ಬಪ್ಪ ಭಜನಾಮೃತ’

ಬೈಂದೂರು/ಭಟ್ಕಳ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದ ಶ್ರೀ ಮಹೇಶ್ ವಿಠಲ ಸಾವಂತ್ ಅವರ ಮನೆಯಲ್ಲಿ ನಡೆಯುತ್ತಿರುವ 21 ದಿನಗಳ ಗಣೇಶೋತ್ಸವದ 19ನೇ ದಿನವಾದ ಅಂಗಾರಕ ಸಂಕಷ್ಟಿಯಂದು ಹಿರಿಯ ಕಲಾವಿದ ಉಮೇಶ ಮೇಸ್ತ ಶಿರೂರು ಮತ್ತು ತಂಡದವರಿಂದ ವಿಶೇಷ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮ ನಡೆಯಿತು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಉಮೇಶ ಮೇಸ್ತ ಶಿರೂರು ಅವರು ಮರಾಠಿ ಭಕ್ತಿಗೀತೆಗಳನ್ನು ಹಾಡಿದರೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಹಾಗೂ ಕವಿ ಉಮೇಶ ಮುಂಡಳ್ಳಿ, ಭಟ್ಕಳ ಅವರು ಕನ್ನಡ ಮತ್ತು ಹಿಂದಿ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಸುದರ್ಶನ ಮೇಸ್ತ ಶಿರೂರು ಸಹಗಾಯನದಲ್ಲಿ ಭಾಗವಹಿಸಿದರು.

ಮರಾಠಿ, ಕನ್ನಡ ಹಾಗೂ ಹಿಂದಿ ಭಕ್ತಿಗೀತೆಗಳ ಸಂಗಮವಾಗಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಭಕ್ತರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು. ಕರ್ನಾಟಕದಿಂದ ಬಂದ ಕಲಾವಿದರು ತಮ್ಮವರೇ ಎಂಬಷ್ಟು ಆತ್ಮೀಯವಾಗಿ ಕಾರ್ಯಕ್ರಮ ನೀಡಿದುದು ವಿಶೇಷವಾಗಿತ್ತು.

ಮಹೇಶ್ ಸಾವಂತ್ ಅವರು ಕಳೆದ 25 ವರ್ಷಗಳಿಂದ ಪಖವಾಜ್ ವಾದನ ಹಾಗೂ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೂಡಾಳದಲ್ಲಿ ‘ಜಗನ್ನಾಥ್ ಸಂಗೀತ ವಿದ್ಯಾಲಯ’ ನಡೆಸುತ್ತಿದ್ದಾರೆ. ಇಲ್ಲಿ ಸುಮಾರು 600 ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಉಮೇಶ ಮೇಸ್ತ ಹಾಗೂ ತಂಡದವರು ಇಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಹರೀಶ್ ಶೇಟ್ ಕುಮಟಾ (ತಬಲಾ), ನವೀನ್ ಶೇಟ್ ಹೊನ್ನಾವರ (ಕೀಬೋರ್ಡ್), ಶ್ಯಾಮ್ ಮೇಸ್ತ ಶಿರೂರು (ಪಖವಾಜ್) ಹಾಗೂ ಕುಮಾರ್ ಮೇಸ್ತ ಶಿರೂರು (ತಾಳ) ಸಾಥ್ ನೀಡಿದರು. ಕಾರ್ಯಕ್ರಮದ ಬಳಿಕ ಮಹೇಶ್ ಸಾವಂತ್ ಅವರು ಕರ್ನಾಟಕದ ಎಲ್ಲ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!