‘ಮೊದಲು ಘೋಷಣೆ ಮಾಡಿ, ಬಳಿಕ ನೋಡೋಣ’ ಎಂದಿದ್ದ ಖಾದರ್: ವೇದವ್ಯಾಸ ಕಾಮತ್

ಮಂಗಳೂರು:* ಸಚಿವ ಸಂಪುಟ ಸಭೆಗೂ ಮುನ್ನ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎದುರು ಕರಾವಳಿಯ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸುವ ವೇಳೆ, ‘ಮೊದಲು ಘೋಷಣೆ ಮಾಡಿ, ಬಳಿಕ ಉಳಿದುದನ್ನು ನೋಡೋಣ’ ಎಂಬ ನಿಲುವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವ್ಯಕ್ತಪಡಿಸಿದ್ದರು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಆರೋಪಿಸಿದರು.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಗೂ ನಾಲ್ಕೈದು ದಿನಗಳ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರೊಂದಿಗೆ ಮುಖ್ಯಮಂತ್ರಿಗಳ ಭೇಟಿಗೆ ಸಮಯ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳನ್ನೂ ಸಭೆಗೆ ಆಹ್ವಾನಿಸಿದ್ದರು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲೆಯ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು, “ಒಮ್ಮೆ ಘೋಷಣೆ ಮಾಡಿಬಿಡೋಣ, ಉಳಿದದ್ದನ್ನು ಮತ್ತೆ ನೋಡೋಣ” ಎಂಬ ರೀತಿಯಲ್ಲಿ ಮಾತನಾಡಿದ್ದರು ಎಂದು ಕಾಮತ್ ಹೇಳಿದರು.

“ನಾನು ಹೇಳುತ್ತಿರುವುದು ಸತ್ಯ. ಈ ಮಾತುಗಳು ನಡೆದಿಲ್ಲ ಎಂದು ಯು.ಟಿ. ಖಾದರ್ ಅವರು ಹೇಳಲಿ. ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯಕ್, ಉಮಾನಾಥ ಕೋಟ್ಯಾನ್ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದವರನ್ನು ಕೇಳಬಹುದು. ಐವನ್ ಡಿಸೋಜ ಹಾಗೂ ಮಂಜುನಾಥ ಭಂಡಾರಿ ಅವರನ್ನೂ ಕೇಳಬಹುದು. ಯಾರು ಏನು ಮಾತನಾಡಿದ್ದಾರೆ ಎಂಬುದು ಅವರಿಗೆ ಗೊತ್ತಿದೆ” ಎಂದು ವೇದವ್ಯಾಸ ಕಾಮತ್ ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದ ಬಳಿಕ ಯೋಜನೆಗಳ ಅನುಷ್ಠಾನದ ಬಗ್ಗೆ ನೋಡೋಣ ಎಂಬ ಮನೋಭಾವ ಸರ್ಕಾರದಲ್ಲಿತ್ತು ಎಂಬುದು ಈ ಸಭೆಯಿಂದಲೇ ಸ್ಪಷ್ಟವಾಗುತ್ತದೆ ಎಂದು ಅವರು ಆರೋಪಿಸಿದರು. ಇದೇ ಕಾರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಹಲವು ಘೋಷಣೆಗಳ ಬಗ್ಗೆ ತಾವು ಆರಂಭದಿಂದಲೇ ಪ್ರಶ್ನೆ ಎತ್ತುತ್ತಿದ್ದೇನೆ ಎಂದರು.

“ಸಚಿವ ಸಂಪುಟ ಸಭೆಗೂ ಮುನ್ನವೇ ಈ ಘೋಷಣೆಗಳ ವಾಸ್ತವಿಕತೆ ಬಗ್ಗೆ ಅನುಮಾನ ಮೂಡಿತ್ತು. ಈಗ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಜನರಿಗೆ ಘೋಷಣೆಗಳನ್ನು ಮಾಡಿ ಬಳಿಕ ಅನುಷ್ಠಾನದ ವಿಚಾರದಲ್ಲಿ ವಿಳಂಬ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕಾಮತ್ ಟೀಕಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!