ಮಂಗಳೂರು:ಎಂ.ಆರ್.ಪಿ.ಎಲ್.ನಲ್ಲಿ ಸಂಭವಿಸಿರುವ ಸ್ಫೋಟದ ಕುರಿತು ಸಂಬಂಧಪಟ್ಟವರಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ

ಘಟನೆ ಸಂಬಂಧಿಸಿದಂತೆ ಎಂ.ಆರ್.ಪಿಎಲ್ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಬಜ್ಜೆ ಪಟ್ಟಣ ಪಂಚಾಯತ್ ಹಾಗೂ ಅಗ್ನಿಶಾಮಕದಳದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಸ್ಫೋಟದ ನಂತರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗಿದ್ದು, ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ಹಾಗೂ ಸುರಕ್ಷತೆ ಕಾರ್ಯಾಚರಣೆ ಭರದಿಂದ ಸಾಗಿಸಲು ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ.

ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಅಗತ್ಯ ಸಿದ್ಧತೆಗಳೊಂದಿಗೆ ಸನ್ನದ್ದವಾಗಿರಲು ಸೂಚನೆ ನೀಡಲಾಗಿದೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದೆಂದು ವಿನಂತಿಸುತ್ತೇನೆ ಎಂದೂ ಚೌಟ ಹೇಳಿದ್ದಾರೆ.
ಅವರು ಇಂದು ಬೆಳ್ತಂಗಡಿಯಲ್ಲಿ ಪೂರ್ವನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಲು ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಪ್ರತಿಯೊಬ್ಬರೂ ಶಾಂತಿಯುತವಾಗಿರಲು, ಯಾವುದೇ ರೀತಿಯ ವದಂತಿಗಳು ಅಥವಾ ತಪ್ಪು ಮಾಹಿತಿಗಳನ್ನು ಹರಡದಂತೆ ಮತ್ತು ಆಡಳಿತ ಮಂಡಳಿಯೊಂದಿಗೆ ಸಂಪೂರ್ಣವಾಗಿ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸುತ್ತೇನೆ

