ಮಂಗಳೂರು: ಜೋಕಟ್ಟೆ ಸಮೀಪದ MRPL ಘಟಕದಲ್ಲಿ ಇಂದು ಸಂಭವಿಸಿದ ಭಾರೀ ಸ್ಫೋಟವು ಸುತ್ತಮುತ್ತಲಿನ ಜನರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ. ಸ್ಫೋಟದ ಭಾರೀ ಶಬ್ದವು ಕಾಟಿಪಳ್ಳ, ಬಾಳ ಸೇರಿದಂತೆ ದೂರದ ಪ್ರದೇಶಗಳಲ್ಲಿಯೂ ಕೇಳಿಸಿಕೊಂಡಿದ್ದು, ಸುತ್ತಮುತ್ತಲಿನ ಮನೆಗಳು ಹಾಗೂ ಕಟ್ಟಡಗಳಿಗೆ ಹಾನಿಯಾಗಿರುವ ವರದಿಗಳು ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.

ಸಾವಿರಾರು ಜನರು ವಾಸಿಸುವ ಪ್ರದೇಶದ ಸಮೀಪದಲ್ಲಿರುವ ಇಂತಹ ಬೃಹತ್ ಕೈಗಾರಿಕಾ ಘಟಕದಲ್ಲಿ ಇಂತಹ ಘಟನೆ ಸಂಭವಿಸಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. MRPLನಲ್ಲಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಮಾನದಂಡಗಳು ಸಮರ್ಪಕವಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಕೈಗಾರಿಕಾ ಸುರಕ್ಷತಾ ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕು.
ಸ್ಫೋಟಕ್ಕೆ ನಿಖರ ಕಾರಣವೇನು, ಸುರಕ್ಷತಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ಸಂಭವಿಸಿದೆಯೇ, ತುರ್ತು ಪರಿಸ್ಥಿತಿ ನಿರ್ವಹಣಾ ವ್ಯವಸ್ಥೆ ಸಮರ್ಪಕವಾಗಿತ್ತೇ ಎಂಬುದರ ಕುರಿತು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ತನಿಖೆಯ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.

ಸ್ಫೋಟದ ಪರಿಣಾಮವಾಗಿ ಮನೆಗಳು, ಕಟ್ಟಡಗಳು ಹಾಗೂ ಇತರ ಆಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತವು ತಕ್ಷಣ ಸಮಗ್ರ ಸಮೀಕ್ಷೆ ನಡೆಸಿ, ಹಾನಿಯ ವೈಜ್ಞಾನಿಕ ಮೌಲ್ಯಮಾಪನ ಮಾಡಬೇಕು. ಹಾನಿಗೊಳಗಾದ ಕುಟುಂಬಗಳಿಗೆ MRPL ವತಿಯಿಂದ ಸೂಕ್ತ ಮತ್ತು ನ್ಯಾಯಸಮ್ಮತ ಪರಿಹಾರವನ್ನು ತಕ್ಷಣ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಜನರ ಜೀವ ಮತ್ತು ಆಸ್ತಿಯ ಸುರಕ್ಷತೆಯನ್ನು ಕಡೆಗಣಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. MRPL ಸೇರಿದಂತೆ ಕರಾವಳಿ ಪ್ರದೇಶದಲ್ಲಿರುವ ಅಪಾಯಕಾರಿ ಕೈಗಾರಿಕಾ ಘಟಕಗಳ ಸುರಕ್ಷತಾ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿರುವ ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಬೇಕು.

ಈ ಘಟನೆಯಿಂದ ಭಯಭೀತರಾಗಿರುವ ಸ್ಥಳೀಯ ಜನರಿಗೆ ಜಿಲ್ಲಾಡಳಿತವು ಸ್ಪಷ್ಟ ಮಾಹಿತಿ ನೀಡಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಆಗ್ರಹಿಸಿದ್ದಾರೆ.

