ಎಂಆರ್‌ಪಿಎಲ್ ದುರಂತ: ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ್ ಭಂಡಾರಿ ತೀವ್ರ ಕಂಬನಿ, ಸುರಕ್ಷತೆಗೆ ಆಗ್ರಹ ನೀಡಲು ಮನವಿ

ಮಂಗಳೂರು: ಜೋಕಟ್ಟೆ ಸಮೀಪದ ಎಂಆರ್‌ಪಿಎಲ್ (MRPL) ಸಂಸ್ಕರಣಾ ಘಟಕದ ಕೋಕರ್ ಹೈಡ್ರೋಟ್ರೀಟರ್ ವಿಭಾಗದಲ್ಲಿ ಸಂಭವಿಸಿದ ಭಾರೀ ಸ್ಫೋಟ ದುರಂತದಲ್ಲಿ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಅತ್ಯಂತ ದಿಗ್ಭ್ರಮೆ ಮತ್ತು ಬೇಸರ ತಂದಿದೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಾ. ಮಂಜುನಾಥ್ ಭಂಡಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗೂ ಸುಟ್ಟ ಗಾಯಗಳಿಂದ ಶ್ರೀನಿವಾಸ ಆಸ್ಪತ್ರೆ, ಜೆ.ಎಂ. ಆಸ್ಪತ್ರೆ ಮತ್ತು ಎಂಆರ್‌ಪಿಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಬಾಪ್ಟಿಸ್ಟ್ ಸೇರಿದಂತೆ ಎಲ್ಲಾ ಗಾಯಾಳುಗಳಿಗೆ ಸಂಸ್ಥೆಯ ವೆಚ್ಚದಲ್ಲೇ ಉತ್ತಮ ದರ್ಜೆಯ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಂಆರ್‌ಪಿಎಲ್‌ನಂತಹ ಬೃಹತ್ ಮತ್ತು ಸೂಕ್ಷ್ಮ ಕೈಗಾರಿಕಾ ಘಟಕಗಳಲ್ಲಿ ಇಂತಹ ಅಪಾಯಕಾರಿ ಸ್ಫೋಟಗಳು ಸಂಭವಿಸುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸ್ಫೋಟದ ತೀವ್ರತೆಗೆ ಜೋಕಟ್ಟೆ, ಬಜ್ಪೆ ಸೇರಿದಂತೆ 15 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನ ಉಂಟಾಗಿ ಮನೆಗಳಿಗೆ ಹಾನಿಯಾಗಿರುವುದು ಗಂಭೀರ ವಿಚಾರ. ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಎಂಆರ್‌ಪಿಎಲ್ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ತಕ್ಷಣವೇ ಉನ್ನತ ಮಟ್ಟದ ತಾಂತ್ರಿಕ ತನಿಖೆ ನಡೆಸಿ, ಘಟಕದಲ್ಲಿ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!