ಸುಳ್ಯ: ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದರು.


ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟ ಸಮಿತಿ ವತಿಯಿಂದ ಆಯೋಜಿಸಿದ್ದ ಸುಳ್ಯ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ–ಬಾಲಕಿಯರ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯಕ್ಕೂ ಪೂರಕವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿದೆ. ಆದರೆ ಅಗತ್ಯ ಕ್ರೀಡಾ ಸೌಲಭ್ಯಗಳ ಕೊರತೆಯಿಂದ ಗ್ರಾಮೀಣ ಭಾಗದ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಶೀಲಾವತಿ ಮಾಧವ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಕೆ.ಎಂ. ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಶಿಕಲಾ ನೀರಬಿದಿರೆ, ವೈ.ಎಸ್. ಹರಗಿ, ವೀಣಾ ಎಂ.ಟಿ., ಸುಜಯ ಕುಮಾರಿ ನಿಡಿಂಜಿ, ದಿನೇಶ್ ಗೌಡ ಕೆ., ಧನಂಜಯ ಸಂಪಾಜೆ, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಗೋಪಿನಾಥ ಮಿತ್ತಡ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕೆ.ಎಸ್., ಲಿಪಿಕ ನೌಕರರ ಸಂಘದ ಅಧ್ಯಕ್ಷ ವಿಜೇತ್ ಮಾವಿನಕಟ್ಟೆ, ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್–1 ಸಂಘದ ಅಧ್ಯಕ್ಷ ಪದ್ಮನಾಭ ಎಡಮಂಗಲ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ್ ಕೆ.ಎಸ್., ಕೊಯಿಕುಳಿ ಶಾಲಾ ಮುಖ್ಯ ಶಿಕ್ಷಕ ಬೆಳ್ಯಪ್ಪ ಕೆ., ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ. ವಿಶ್ವನಾಥ, ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಮೋಂಟಡ್ಕ ಹಾಗೂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ನೀರಬಿದಿರೆ ಉಪಸ್ಥಿತರಿದ್ದರು.

